ಮೈಸೂರು, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ಮೈಸೂರಿನಲ್ಲಿ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್) ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿ ಮಾತನಾಡಿದರು.
ಮಾತು ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ತಜ್ಞರು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವುದು ಅಗತ್ಯವೆಂದು ಅವರು ಹೇಳಿದರು.
ಸಮಾಜವು ಇಂತಹ ಸಮಸ್ಯೆಗಳಿಂದ ಬಳಲುವವರ ಬಗ್ಗೆ ಸಹಾನುಭೂತಿ ಹಾಗೂ ಸಹಕಾರದ ಮನೋಭಾವ ಹೊಂದಬೇಕು ಎಂದು ಹೇಳಿದರು.
ಕಾಕ್ಲಿಯರ್ ಇಂಪ್ಲಾಂಟ್‌ಗಳಂತಹ ಸಾಧನಗಳನ್ನು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಲು ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗುವುದು ಅಗತ್ಯವಿದೆ ಎಂದ ಅವರು, ಈ ದಿಕ್ಕಿನಲ್ಲಿ ಆಯಿಷ್ ಮುಂತಾದ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಸಾರ್ವಜನಿಕ ಸ್ಥಳಗಳು, ಸೌಲಭ್ಯಗಳು ಮತ್ತು ಮಾಹಿತಿ ಮೂಲಗಳು ಅಂಗವಿಕಲ ಸ್ನೇಹಿಯಾಗಿರಬೇಕು. ಇದು ಕೇವಲ ಅನುಕೂಲವನ್ನೇ ನೀಡುವುದಲ್ಲದೆ, ಸಮಾಜವು ಅವರ ಬಗ್ಗೆ ಕಾಳಜಿ ವಹಿಸುತ್ತಿದೆ ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು.
ಆಯಿಷ್ ಸಂಸ್ಥೆಯ ಕಾರ್ಯವನ್ನು ಪ್ರಶಂಸಿಸಿದ ಅವರು, ವಾಕ್ ಮತ್ತು ಶ್ರವಣದೋಷವುಳ್ಳವರು ಸಾಮಾನ್ಯ ಜೀವನ ನಡೆಸಲು ಹಾಗೂ ಸಮಾಜ ಮತ್ತು ಆರ್ಥಿಕತೆಗೆ ತಮ್ಮ ಕೊಡುಗೆ ನೀಡಲು ನೆರವಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ನಂತರ ರಾಷ್ಟ್ರಪತಿ ಮುರ್ಮು ಅವರು ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾಂಗ ಮಕ್ಕಳು ಹಾಗೂ ಚಿಕಿತ್ಸೆ ಪಡೆದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವ ದಿವ್ಯಾಂಗ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa