ಶಿವಮೊಗ್ಗ, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕುವೆಂಪು ವಿಶ್ವವಿದ್ಯಾಲಯ 2025-26ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಪದವಿ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 18ರವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ಆಗಸ್ಟ್ 08ರವರೆಗೆ ನಿಗದಿಗೊಳಿಸಲಾಗಿತ್ತು.
ಆದರೆ ಕುವೆಂಪು ವಿಶ್ವವಿದ್ಯಾಲಯದ ರಿಪೀಟರ್ಸ್ ಪರೀಕ್ಷೆ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕ ಪದವಿಗಳ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ವಿಳಂಬವಾಗಿರುವುದನ್ನು ಗಮನಿಸಿ, ಅಂತಹ ವಿದ್ಯಾರ್ಥಿಗಳಿಗೂ ಅನುಕೂಲವಾಗಲೆಂದು ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ. ಯುಯುಸಿಎಂಎಸ್ ಪೊರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಸಂಬಂಧಿಸಿದ ವಿಭಾಗಗಳಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರವೇಶಾತಿ ಕೌನ್ಸಿಲಿಂಗ್ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ವಿಶ್ವವಿದ್ಯಾಲಯದ ಪರಿಷ್ಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa