ವಿಜಯಪುರ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿದ್ದು ಎಂ.ಬಿ.ಎ ವಿದ್ಯಾರ್ಥಿಗಳು ಉತ್ತಮ ಜ್ಞಾನಾರ್ಜನೆ ಮತ್ತು ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಂಡು ಯುವ ಉದ್ಯಮಿಗಳಾಗಿ ನಾಡಿನ ಕೀರ್ತಿ ಬೆಳಗಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ.
ಸೋಮವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಿ ಕಾಮರ್ಸ್ ಅಟೊನಾಮಸ್ ಕಾಲೇಜಿನಲ್ಲಿ ಡಿಪಾರ್ಟಮೆಂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಮತ್ತು ಸಂಶೋಧನ ಕೇಂದ್ರ ಆಯೋಜಿಸಿದ್ದ ಪಾಲಕರು ಮತ್ತು ಕಾಲೇಜು ಆಳಡಳಿತ ಮಂಡಳಿ ಸಭೆಯಲ್ಲಿ 14 ಜನ ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಈಗ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕೋರ್ಸುಗಳಿಗೆ ಸರಿಸಮನಾಗಿ ಮ್ಯಾನೇಜಮೆಂಟ್ ಕೋರ್ಸ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ವೃತ್ತಿಕೌಶಲ್ಯ ಹೊಂದಿದವರಿಗೆ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳೂ ಇವೆ. ವಿದ್ಯಾರ್ಥಿಗಳು ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಅಧ್ಯಯನ ಮತ್ತು ಸಂಶೋಧನೆ ನಡೆಸಿ ಹೊಸ ತಂತ್ರಜ್ಞಾನ ಸದುಪಯೋಗ ಪಡಿಸಿಕೊಂಡ ವ್ಯವಹಾರ ಪ್ರಾರಂಭಿಸಿ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಬೇಕು. ಪಾಲಕರೂ ಕೂಡ ತಮ್ಮ ಮಕ್ಕಳಿಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು. ಬಿ.ಎಲ್.ಡಿ.ಇ ಸಂಸ್ಥೆ ನವ್ಯೋದ್ಯಮಕ್ಕಾಗಿ ಇನಕ್ಯೂಬೇಶನ್ ಸೆಂಟರ್ ಪ್ರಾರಂಭಿಸಿದ್ದು, ಅಲ್ಲಿ ಸ್ಟಾರ್ಟಪ್ ಮತ್ತು ಪ್ಲೇಸಮೆಂಟ್ ಗೆ ಬೇಕಾದ ನೆರವು ಲಭ್ಯವಿದೆ. ಎಂ.ಬಿ.ಎ ಕಾಲೇಜನ್ನು ರಾಜ್ಯದ ಅತ್ಯುತ್ತಮ ಮ್ಯಾನೇಜಮೆಂಟ್ ಕಾಲೇಜನ್ನಾಗಿ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಅವಕಾಶಗಳು ಕಡಿಮೆ ಇದ್ದಾಗ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಬಿ. ಎಂ. ಪಾಟೀಲರು ಜಿಲ್ಲೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡದರು. ಎಂ. ಬಿ. ಪಾಟೀಲ ಅವರು ಈಗ ಶಿಕ್ಷಣ, ಆರೋಗ್ಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಆಧುನಿಕ ಸ್ಪರ್ಷ ನೀಡಿದ್ದಾರೆ. ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜು ಈಗ ರಾಜ್ಯದ ಅತ್ಯುತ್ತಮ 4ನೇ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ ಅಟೋಮೊಬೈಲ್ ಕ್ಷೇತ್ರದ ತಜ್ಞರ ತಂಡ ಆಗಷ್ಟ 21 ರಂದು ನಗರಕ್ಕೆ ಆಗಮಿಸುತ್ತಿದ್ದು, ಪಾಟೀಲ ಹೊಂಡಾ ಯಶೋಗಾಥೆ ಕುರಿತು ಮಾಹಿತಿ ಪಡೆಯಲಿದೆ ಎಂದು ಅವರು ತಿಳಿಸಿದರು.
ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ಮಾಡಿರುವ ನೀರಾವರಿ ಕೆಲಸಗಳಿಂದಾಗಿ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬೆಳೆಬಾರದ ಭೂಮಿಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇದರಿಂದ ಇಥೆನಾಲ್ ಉತ್ಪಾದಿಸಬಹುದಾಗಿದ್ದು, ಜಿಲ್ಲೆಯಲ್ಲಿ 50 ಹೊಸ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಇದು ರೈತರ ಬಾಳು ಹಸನಾಗಲು ನೆರವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ನಾನಾ ಕಂಪನಿಗಳಲ್ಲಿ ಉದ್ಯೋಗ ಪಡೆದ 14 ವಿದ್ಯಾರ್ಥಿಗಳಿಗೆ ಸುನೀಲಗೌಡ ಪಾಟೀಲ ನೇಮಕಾತಿ ಆದೇಶ ಪತ್ರ ವಿತರಿಸಿ ಶುಭ ಕೋರಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಆಡಳಿತಾಧಿಕಾರಿ ವಿಲಾಸ ಬಗಲಿ, ಪೋಷಕರ ಪರವಾಗಿ ಅಡಿವೆಪ್ಪ ಸಾಲಗರ ಮಾತನಾಡಿದರು.
ಇದೇ ವೇಳೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಕ್ಷ್ಮಣ ಪವಾರ ಸಹಸಂಪಾದಿಸಿರುವ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮತ್ತು ವೆಲ್ತ್ ಮ್ಯಾನೇಜಮೆಂಟ್ ಪುಸ್ತಕವನ್ನು ಸುನೀಲಗೌಡ ಪಾಟೀಲ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಎ.ಎಸ್.ಪಿ. ಕಾಮರ್ಸ್ ಅಟೊನಾಮಸ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಬಿ. ಕಮತಿ, ವ್ಯವಹಾರ ಅಧ್ಯನಯ ಶಾಸ್ತ್ರ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸನ್ಮಿತಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಮುರುಗೇಶ ಪಟ್ಟಣಶೆಟ್ಟಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೌರಿ ಕಲಗೊಂಡ ನಿರೂಪಿಸಿದರು. ಡಾ. ಅಶ್ವಿನಿ ಯರನಾಳ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande