ಬೆಂಗಳೂರು, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಆಗಸ್ಟ್ 10) ಬೆಂಗಳೂರಿಗೆ ಆಗಮಿಸಲಿದ್ದು, ನಗರದ ಸಾರಿಗೆ ಮೂಲಸೌಕರ್ಯ ವಿಸ್ತರಣೆಗೆ ಸಂಬಂಧಿಸಿದ ಎರಡು ಮಹತ್ವದ ಯೋಜನೆಗಳನ್ನು ಉದ್ಘಾಟಿಸುವುದರ ಜೊತೆಗೆ ಮತ್ತೊಂದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ಸರ್ಕಲ್ ಹೆಲಿಪ್ಯಾಡ್‌ಗೆ ತೆರಳಿ, ಬಳಿಕ ರಸ್ತೆ ಮಾರ್ಗವಾಗಿ ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 11.10ಕ್ಕೆ ಬೆಂಗಳೂರು–ಬೆಳಗಾವಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದು, ಇದೇ ಸಂದರ್ಭದಲ್ಲಿ ಅಮೃತ್‌ಸರ್–ಶ್ರೀಮತಾ ವೈಷ್ಣೋದೇವಿ ಕತ್ರಾ ಹಾಗೂ ಅಜ್ನಿ–ಪುಣೆ ಮಾರ್ಗಗಳ ವಂದೇ ಭಾರತ್ ರೈಲುಗಳಿಗೂ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.
ನಂತರ ರಸ್ತೆ ಮಾರ್ಗವಾಗಿ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ, ನಮ್ಮ ಮೆಟ್ರೋ ಹಳದಿ ಮಾರ್ಗ (ಆರ್‌ವಿ ರಸ್ತೆ–ಬೊಮ್ಮಸಂದ್ರ)ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 19.15 ಕಿಲೋಮೀಟರ್ ಉದ್ದ, 16 ನಿಲ್ದಾಣಗಳನ್ನು ಹೊಂದಿದ, ₹5,056.99 ಕೋಟಿ ವೆಚ್ಚದಲ್ಲಿ ನಿರ್ಮಿತ ಈ ಮಾರ್ಗದಲ್ಲಿ ಪ್ರಧಾನಿ ಸ್ವತಃ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಮೆಟ್ರೋ ಪ್ರಯಾಣ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಐಐಐಟಿ ಬೆಂಗಳೂರು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮೆಟ್ರೋ ಮೂರನೇ ಹಂತದ ಆರೆಂಜ್ ಲೈನ್ (44.65 ಕಿ.ಮೀ, ₹15,611 ಕೋಟಿ ವೆಚ್ಚ) ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.40ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿದ್ದಾರೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa