ಬೆಂಗಳೂರು, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ಹಾಗೂ ಲೋಕ ಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಆಗಸ್ಟ್ 7ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ತಾವು ಪ್ರದರ್ಶಿಸಿದ ದಾಖಲೆಗಳು ಭಾರತ ಚುನಾವಣಾ ಆಯೋಗದ ದಾಖಲೆಗಳೆಂದು ಹಾಗೂ ಹಿಮಾಚಲ ಪ್ರದೇಶದ ಮತದಾರ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆಯೆಂದು ರಾಹುಲ್ ಗಾಂಧಿ ಆರೋಪಕ್ಕೆ ದಾಖಲೆ ನೀಡುವಂತೆ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲಾಗಿದೆ. ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದರೆಂಬ ನಿಮ್ಮ ಆರೋಪಕ್ಕೆ ಆಧಾರವಾದ ದಾಖಲೆಗಳನ್ನು ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಮುಖ್ಯ ಚುನಾವಣಾಧಿಕಾರಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಶಕುನ್ ರಾಣಿ ಒಮ್ಮೆ ಮಾತ್ರ ಮತ ಚಲಾಯಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ, ರಾಹುಲ್ ಗಾಂಧಿ ಪ್ರದರ್ಶಿಸಿದ ದಾಖಲೆ, ಮತಗಟ್ಟೆ ಅಧಿಕಾರಿಯಿಂದ ಹೊರಡಿಸಲ್ಪಟ್ಟ ಅಧಿಕೃತ ದಾಖಲೆ ಅಲ್ಲವೆಂದು ತಿಳಿಸಲಾಗಿದೆ.
ದಾಖಲೆಗಳನ್ನು ನೀಡದಿದ್ದಲ್ಲಿ ಆರೋಪ ಸಾಬೀತಾಗುವುದಿಲ್ಲವೆಂದು ಎಚ್ಚರಿಸಿರುವ ಚುನಾವಣಾ ಆಯೋಗ ಆರೋಪದ ಕುರಿತು ಸಮಗ್ರ ದಾಖಲೆ ಒದಗಿಸಲು ಸೂಚಿಸಿದೆ. ಆರೋಪದ ಕುರಿತು ಸಮಗ್ರ ದಾಖಲೆ ಒದಗಿಸಿದರೆ
ಆರೋಪಗಳ ಮೇಲಿನ ಸವಿಸ್ತಾರ ತನಿಖೆ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಆಯೋಗ ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.
ಎರಡು ದಿನಗಳ ಹಿಂದೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಬಹಿರಂಗ ಆರೋಪ ಮಾಡಿ ಮತ ಕಳ್ಳತನ ನಡೆದಿರುವ ಕುರಿತು ಪ್ರಸ್ತಾಪಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa