ಬೆಂಗಳೂರು, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಪಕ್ಷವೇ ಮತಗಳ್ಳತನದ ಪಿತಾಮಹ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಉಲ್ಲೇಖಿಸಿ ಸಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಅವರು, 1991ರಲ್ಲಿ ಕೊಪ್ಪಳ ಲೋಕ ಸಭಾ ಕ್ಷೇತ್ರದಿಂದ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷವೇ “ಮತಗಳ್ಳತನ”ದ ಮೂಲಕ ಸೋಲಿಸಿತ್ತು ಎಂದಿದ್ದಾರೆ.
ಮತಗಳ್ಳತನದ ನಾಟಕವನ್ನು ಬಯಲು ಮಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷ ಅವಮಾನಿಸಿ ಸಂಪುಟದಿಂದ ವಜಾ ಮಾಡಿತು. ಈಗ ಸಿದ್ದರಾಮಯ್ಯ ಸ್ವತಃ ಕಾಂಗ್ರೆಸ್ ಮೋಸವನ್ನು ಬಯಲು ಮಾಡಿರುವುದರಿಂದ, ರಾಹುಲ್ ಗಾಂಧಿ ಅವರಿಗೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡುವ ಧೈರ್ಯ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.
2018ರ ಬಾದಾಮಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ ಖರೀದಿಯಿಂದ ಗೆದ್ದಿದ್ದರು ಎಂಬ ಆರೋಪವನ್ನು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಈಗಾಗಲೇ ಬಯಲು ಮಾಡಿದ್ದಾರೆ ಎಂದಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ, “ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವೇ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಏಕಚಕ್ರಾಧಿಪತ್ಯ ಸಾಧಿಸಿತ್ತು. ಆ ಸಮಯದಲ್ಲಿ ಇವಿಎಂ ಇರಲಿಲ್ಲ, ಒಬ್ಬ-ಇಬ್ಬರು ಕೂತು ಮತ ಹಾಕುತ್ತಿದ್ದರು ಎಂದು ಅವರು ಸ್ವತಃ ವಿವರಿಸಿದ್ದರು” ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
“ಮತಗಳ್ಳತನದ ಪಿತಾಮಹ ಕಾಂಗ್ರೆಸ್ ಹಾಗೂ ನೆಹರು-ಗಾಂಧಿ ಕುಟುಂಬವೇ. ಈ ವಿಷಯದಲ್ಲಿ ರಾಹುಲ್ ಗಾಂಧಿ ಮಾತನಾಡುವುದೇ ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತಾಗಿದೆ” ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa