ವಿಜಯಪುರ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಕಾಲೇಜು (ಏಮ್ಸ್) ಸ್ಥಾಪನೆ ನನ್ನ ಗುರಿ. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಗೆಗಾಗಿ ಹೋರಾಟ ಸಮಿತಿ ನಿಯೋಗ ಸಚಿವರನ್ನು ಭೇಟಿ ಮಾಡಿ, ವಿಜಯಪುರ ಜಿಲ್ಲೆಗೆ ರಾಜ್ಯ ಸರ್ಕಾರ ಸಾವರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಘೋಷಣೆ ವಿರೋಧಿಸಿ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿ ವೈದ್ಯಕೀಯ ಕಾಲೇಜು ಆರಂಭಿಸುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಖಾಸಗಿ ಸಹಭಾಗಿತ್ವದ ಉದ್ದೇಶದಿಂಧ ಹಿಂದೆ ಸರಿಯಬೇಕು. ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಕುರಿತು ಮುಖ್ಯಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಮೇಲೆ ಒತ್ತಡ ತರುವಂತೆ ನಿಯೋಗದ ಪ್ರಮುಖರು ಆಗ್ರಹಿಸಿದರು.
ಹೋರಾಟಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ವಿಷಯದಲ್ಲಿ ನಾನೂ ಬಹಿರಂಗವಾಗಿ ವಿರೋಧಿಸಿದ್ದೇನೆ. ವಿಜಯಪುರದಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸವಂತೆ 2022ರಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದೀಗ ಸರ್ಕಾರ ಘೋಷಿಸಿರುವ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜಿನ ಬದಲಾಗಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಕಾಲೇಜು (ಏಮ್ಸ್) ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದರು.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶದಿಂದಲೇ ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಅಗತ್ಯ ಇರುವ ಮೂಲಭೂತ ಸಂಪನ್ಮೂಲ ಕಲ್ಪಿಸಲು ಮುಂದಾಗಿದ್ದೆ. ಸರ್ಕಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 450 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ಸ್ಥಾಪಿಸಿದ್ದೇನೆ. 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯೂ ಇದೆ. ನ್ಯೂರಾಲಜಿ ಹಾಗೂ ನ್ಯೂರೋ ಸರ್ಜರಿ ಹಾಗೂ ಆರ್ಥೋಪೆಡಿಕ್ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಎಂದು ವಿವರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ 150 ಕೆರೆಗೂ ಮೀರಿದ ಜಮೀನಿದೆ. 100 ಹಾಸಿಗೆಗಳ ಟ್ರಾಮಾ ಸೆಂಟರ್ ಮಂಜೂರಾಗಿದೆ. ಹೀಗೆ ಸರ್ಕಾರಿ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಇರುವ ಎಲ್ಲ ಮೂಲಭೂತ ಸೌಲಭ್ಯ-ಸಂಪನ್ಮೂಲಗಳನ್ನು ವಿಜಯಪುರ ಜಿಲ್ಲೆ ಹೊಂದಿದೆ. ಕಾರಣ ಇದೇ ವಿಷಯವಾಗಿ ನಾನು ಜಿಲ್ಲೆಯ ಜನರೊಂದಿಗೆ ಇರಲಿದ್ದೇನೆ ಎಂದು ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಹೋರಾಟ ಸಮಿತಿಯ ಸಂಚಾಲಕ ಸಮಿತಿಯ ಬಿ.ಭಗವಾನರೆಡ್ಡಿ, ಅರವಿಂದ ಕುಲಕರ್ಣಿ, ನಾಸಿರ್, ಮಲ್ಲಿಕಾರ್ಜುನ ಕೆಂಗನಾಳ, ಎಚ್.ಗೀತಾ, ಎಚ್.ಟಿ.ಭರತಕುಮಾರ, ಬಾಬುರಾವ್, ಫಯಾಜ್ ಕಲಾದಗಿ, ಸಿದ್ದಲಿಂಗ ಬಾಗೇವಾಡಿ, ಸಿದ್ದರಾಮ ಹಿರೇಮಠ, ಶ್ರೀಕಾಂತ, ಲಲಿತಾ ಬಿಜ್ಜರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande