ಬಳ್ಳಾರಿ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ನಿಖಿಲ್ ಕುಮಾರ ಸ್ವಾಮಿ ಅವರ ನೇತೃತ್ವದಲ್ಲಿ ಆಗಸ್ಟ್ 31ರ ಭಾನುವಾರದಿಂದ ಪ್ರಾರಂಭವಾಗಲಿರುವ ಧರ್ಮಸ್ಥಳದ ನೇತ್ರಾವತಿಯಿಂದ ಬೃಹತ್ ಪಾದಯಾತ್ರೆಯಲ್ಲಿ ಬಳ್ಳಾರಿ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಬುರುಡೆ ಕಥೆಗೆ ಸ್ಪಂದಿಸಿ, ಎಸ್‍ಐಟಿ ರಚನೆ ಮಾಡಿದ್ದು ತಪ್ಪು. ಸರ್ಕಾರ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲಿಕ್ಕಾಗಿ ತಕ್ಷಣವೇ ಸುಗ್ರೀವಾಜ್ಞೆಯನ್ನು ಜಾರಿ ಮಾಡಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದರು.
ವಿಶ್ವಾದ್ಯಂತ ಭಕ್ತರನ್ನು ಹೊಂದಿರುವ ಪವಿತ್ರ ಹಿಂದೂ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳನ್ನು ಸರ್ಕಾರ ತಕ್ಷಣವೇ ತಡೆಯಬೇಕು. ಧರ್ಮಸ್ಥಳದ ವಿರುದ್ಧ ಕೆಲವೊಂದು ಪಟ್ಟ ಭದ್ರ ಹಿತಾಸಕ್ತಿಗಳು ಮತ್ತು ಕಿಡಿಗೇಡಿಗಳು ಕಳಂಕ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಧರ್ಮಸ್ಥಳದ ಪಾವಿತ್ರ್ಯತೆ ಮತ್ತು ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ, ನಂಬಿಕೆ - ವಿಶ್ವಾಸಗಳಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವವರನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದರು.
ಬಳ್ಳಾರಿ ನಗರ ಘಟಕದ ಅಧ್ಯಕ್ಷ ಹೊನ್ನೂರು ಸ್ವಾಮಿ (ವಂಡ್ರಿ), ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪ, ನಗರ ಯುವ ಘಟಕದ ಅಧ್ಯಕ್ಷ ಕಿರಣ್ ಕುಮಾರ್, ಸಿರುಗುಪ್ಪ ತಾಲ್ಲೂಕು ಅಧ್ಯಕ್ಷ ಶಿವನಾರಾಯಣ, ಮುತ್ತು, ಪ್ರದೀಪ್, ಹೊನ್ನಳ್ಳಿ ರಾಜ್, ವಿಜಯ, ನಾಗವೇಣಿ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್