ದಾವಣಗೆರೆ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಯಾವುದೇ ಹಂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಬಾರದು ಮತ್ತು ಶಾಲೆ, ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ದಾವಣಗೆರೆ ಜಿ.ಪಂ ಸಿಇಓ ಗಿತ್ತೆ ಮಾಧವ್ ವಿಠ್ಠಲ್‍ರಾವ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಶಾಲೆ, ಹಾಸ್ಟೆಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ ಅತೀ ಮುಖ್ಯವಾಗಿದೆ. ಎಲ್ಲರೂ ಮಕ್ಕಳ ರಕ್ಷಣೆ ಮಾಡಲು ಮುಂದಾಗಬೇಕು. ಜೊತೆಗೆ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ.
ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಸಹ ಅದನ್ನು ಬಳಸದೇ ಬೀಗಹಾಕಿರುವ ಬಗ್ಗೆ ಗಮನಿಸಲಾಗಿದೆ. ಆದರೆ ಮಕ್ಕಳು ಶೌಚಾಲಯಕ್ಕೆ ಬಯಲು ಪ್ರದೇಶವನ್ನೇ ಆಶ್ರಯಿಸುವ ಸ್ಥಿತಿಯನ್ನು ಅಲ್ಲಿನ ಶಿಕ್ಷಕರೇ ನಿರ್ಮಾಣ ಮಾಡಿರುತ್ತಾರೆ. ಎಲ್ಲಾ ಶಾಲೆಗಳಿಗೆ ನೀರಿನ ಪೂರೈಕೆ ಮಾಡಲು ಕಡ್ಡಾಯ ಮಾಡಲಾಗಿದೆ. ಆದರೂ ಸಹ ಮಕ್ಕಳು ಸ್ವಚ್ಚತೆ ಕಾಪಾಡುವುದಿಲ್ಲ ಎಂದು ಶೌಚಾಲಯಕ್ಕೆ ಬೀಗ ಹಾಕದೇ ಬಳಕೆಗೆ ಅವಕಾಶ ಮಾಡಿಕೊಡಬೇಕು. ಕೆಲವು ಶಾಲೆಗಳಲ್ಲಿ ಶೌಚಾಲಯಗಳು ಇದ್ದರೂ ಸಹ ಸರಿಯಾಗಿ ಬಳಕೆ ಮಾಡಿಕೊಳ್ಳದೇ ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಡಿಡಿಪಿಐ ಅವರು ಸುತ್ತೋಲೆಯ ಮೂಲಕ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಶೌಚಾಲಯ ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa