ಬೆಂಗಳೂರು, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಲು ಹಲವು ಸೂಚನೆಗಳನ್ನು ನೀಡಲಾಯಿತು.
2025-26ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ ₹28 ಸಾವಿರ ಕೋಟಿ ಕೃಷಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8.69 ಲಕ್ಷ ರೈತರಿಗೆ ₹8,362.68 ಕೋಟಿ ಸಾಲ ವಿತರಿಸಲಾಗಿದೆ. ನಬಾರ್ಡ್ ಬಡ್ಡಿ ರಿಯಾಯಿತಿ ಸಾಲ ಮಿತಿ ಶೇ.42ರಷ್ಟು ಕಡಿತಗೊಂಡಿದ್ದರೂ ಸಾಲ ವಿತರಣೆಯಲ್ಲಿ ಶೇ.96ರಷ್ಟು ಪ್ರಗತಿ ಸಾಧನೆ ಮಾಡಲಾಗಿದೆ.
ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಇದರಲ್ಲಿ 2,200 ಹಾಲು ಉತ್ಪಾದಕ ಸಂಘಗಳೂ ಸೇರಿವೆ. ಹಾಲು ಉತ್ಪಾದಕ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅವ್ಯವಹಾರ ಕುರಿತು ನಡೆಯುತ್ತಿರುವ ತನಿಖೆ ಕಾನೂನು ಪ್ರಕಾರ ಮುಂದುವರೆಯಬೇಕೆಂದು ತಿಳಿಸಲಾಯಿತು.
ಹಿರಿಯ ನಿರೀಕ್ಷಕರ 126 ಹಾಗೂ ನಿರೀಕ್ಷಕರ 403 ಹುದ್ದೆಗಳು ಖಾಲಿ ಇರುವುದರಿಂದ ಅವುಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಲಾಯಿತು. ಸಹಕಾರ ಸಂಘ ನಿಬಂಧಕರ ಕಚೇರಿಗಳ ಸೇವೆಗಳ ಗಣಕೀಕರಣ ತ್ವರಿತಗೊಳಿಸಲು ಹಾಗೂ ಅನಧಿಕೃತ ಗಿರವಿದಾರ ಮತ್ತು ಚೀಟಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದರು.
ಸಭೆಯಲ್ಲಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa