ಮಳೆಯಿಂದ ಹೆಸರು ಕಟಾವು ಸಂಕಷ್ಟ, ರೈತರು, ಯಂತ್ರ ಮಾಲೀಕರು ಪರದಾಟ
ಗದಗ, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಈ ಹಂಗಾಮಿನಲ್ಲಿ ಹೆಸರು ಬೆಳೆ ಸಮೃದ್ಧವಾಗಿ ಬೆಳೆಯುತ್ತಿದ್ದರೂ, ನಿರಂತರ ಮಳೆಯಿಂದ ಅನ್ನದಾತರ ಹರ್ಷ ಕ್ಷಣಾರ್ಧದಲ್ಲಿ ಕಹಿಯಾಗುತ್ತಿದೆ. ಕಳೆದ 20 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ, ಗದಗ ಜಿಲ್ಲೆಯ ನೂರಾರು ಎಕರೆ ಜಮೀನಿನಲ್ಲಿ ಹೆಸರು ಕಟಾವು ನಿಂತ
ಫೋಟೋ


ಗದಗ, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಈ ಹಂಗಾಮಿನಲ್ಲಿ ಹೆಸರು ಬೆಳೆ ಸಮೃದ್ಧವಾಗಿ ಬೆಳೆಯುತ್ತಿದ್ದರೂ, ನಿರಂತರ ಮಳೆಯಿಂದ ಅನ್ನದಾತರ ಹರ್ಷ ಕ್ಷಣಾರ್ಧದಲ್ಲಿ ಕಹಿಯಾಗುತ್ತಿದೆ. ಕಳೆದ 20 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ, ಗದಗ ಜಿಲ್ಲೆಯ ನೂರಾರು ಎಕರೆ ಜಮೀನಿನಲ್ಲಿ ಹೆಸರು ಕಟಾವು ನಿಂತುಹೋಗಿದೆ.

ಹೆಸರು ಕಟಾವು ಮಾಡಲು ಜಮೀನಿಗೆ ಬೃಹತ್ ಯಂತ್ರಗಳನ್ನು ತರಲಾಗಿದ್ದರೂ, ತೇವಾಂಶ ಹೆಚ್ಚಾಗಿ ಹೊಲಗಳಲ್ಲಿ ಯಂತ್ರಗಳು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ, ನರಗುಂದ ತಾಲೂಕಿನ ಕಣ್ಣೂರು ಸೇರಿದಂತೆ ಅನೇಕ ಕಡೆ ನೂರಾರು ಯಂತ್ರಗಳು ಕೆಲಸವಿಲ್ಲದೆ ನಿಂತಿವೆ. ಪ್ರತಿವರ್ಷದಂತೆ ಈ ಬಾರಿ ಸಹ ಮಹಾರಾಷ್ಟ್ರ, ಆಂಧ್ರಪ್ರದೇಶ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಿಂದ ನೂರಾರು ಕಟಾವು ಯಂತ್ರಗಳು ಗದಗ ಜಿಲ್ಲೆಗೆ ಬಂದಿದ್ದವು. ಆದರೆ ಮಳೆಯ ಅಬ್ಬರದಿಂದ, ಆ ಯಂತ್ರಗಳು ಹೊಲದ ಅಂಚಿನಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.

ಯಂತ್ರ ಮಾಲೀಕರು ಹಾಗೂ ಸಿಬ್ಬಂದಿ ಸಂಕಷ್ಟದಲ್ಲಿದ್ದಾರೆ. ಊಟ, ವಸತಿ ವ್ಯವಸ್ಥೆಯ ಕೊರತೆಯಿಂದಾಗಿ ಅವರು ಡಾಬಾಗಳು, ರಸ್ತೆ ಪಕ್ಕದಲ್ಲಿ ದಿನ ಕಳೆಯುವಂತಾಗಿದೆ. ಹಲವರು ತಮ್ಮ ಸಿಬ್ಬಂದಿಗೆ ವೇತನ ನೀಡಲು ಹೈರಾಣಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ಕಟಾವು ಕಾರ್ಯ ಮುಗಿಸಿ ಭರ್ಜರಿ ಲಾಭದೊಂದಿಗೆ ಹಿಂತಿರುಗುತ್ತಿದ್ದ ಯಂತ್ರ ಮಾಲೀಕರು, ಈ ಬಾರಿ ಬೃಹತ್ ನಷ್ಟ ಎದುರಿಸುತ್ತಿದ್ದಾರೆ.

ರೈತರು ಮತ್ತೊಂದು ದಿಕ್ಕಿನಲ್ಲಿ ಹತಾಶರಾಗಿದ್ದಾರೆ. ಸಾಲ, ಸೂಲು ಮಾಡಿ ಬೆಳೆದ ಹೆಸರು ಜಮೀನಿನಲ್ಲಿ ಕೊಳೆಯುತ್ತಿದೆ. ಮಳೆಯು ನಿಂತರೆ ಕಟಾವು ಮಾಡಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರೂ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಕನಸುಗಳು ಮಣ್ಣುಮಹಡಿಯಾಗುತ್ತಿವೆ.

“ಮಳೆ ಬಂದರೆ ಕೇಟಲ್ಲ, ಮನೆ ಮಗ ಉಂಡರೆ ಕೇಟಲ್ಲ” ಎಂಬ ಹಳೆಯ ಮಾತನ್ನು ನೆನಪಿಸುವಂತಾಗಿದೆ. ಆದರೆ ಈ ಬಾರಿ ಮಳೆಯ ಅತಿಯಾದ ಆರ್ಭಟ ಅನ್ನದಾತರ ಬದುಕಿಗೆ ಹೊಡೆತ ನೀಡುತ್ತಿದೆ.

ಗದಗ ಜಿಲ್ಲೆಯ ನರಗುಂದ, ರೋಣ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಭಾಗಗಳಲ್ಲಿ ಸಾವಿರಾರು ಎಕರೆ ಹೆಸರು ಬೆಳೆ ಹೊಲದಲ್ಲೇ ಕೊಳೆಯುವ ಭೀತಿ ಎದುರಾಗಿದೆ. ರೈತರೊಂದಿಗೆ ಹೊರ ರಾಜ್ಯದಿಂದ ಬಂದ ಯಂತ್ರ ಮಾಲೀಕರು, ಸಿಬ್ಬಂದಿಗಳು ಸಹ ಗಂಭೀರ ಸಂಕಷ್ಟದಲ್ಲಿ ಸಿಲುಕಿದ್ದು, “ಇನಾದ್ರೂ ವರುಣ ತನ್ನ ಆರ್ಭಟಕ್ಕೆ ಬ್ರೇಕ್ ಹಾಕ್ತಾನಾ?” ಎಂಬ ಕಾದು ನೋಡುವ ಪರಿಸ್ಥಿತಿ ಉಂಟಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande