ಗದಗ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಾ, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲೆಯ ಗಣೇಶ ಮೂರ್ತಿ ತಯಾರಕರು ಕಳೆದ ಒಂದು ದಶಕದಿಂದ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬಳಕೆಯಿಂದ ನದಿಗಳು, ಕೆರೆಗಳು, ಜಲಮೂಲಗಳು ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ, ಮಣ್ಣಿನ ಮೂರ್ತಿಗಳ ತಯಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ “ಒಂದೇ ಸೂರಿನಡಿ ಮೂರ್ತಿ ಮಾರಾಟ” ಪ್ರತಿ ವರ್ಷ ಆಯೋಜಿಸಲಾಗುತ್ತಿದೆ.
ಈ ಬಾರಿ ಕೂಡ ಗದಗ-ಬೆಟಗೇರಿ ಪ್ರದೇಶದೊಂದಿಗೆ ಧಾರವಾಡ, ಹಾವೇರಿ ಜಿಲ್ಲೆಗಳ ಕಲಾವಿದರು ಸೇರಿ ನಗರದ ವಿವೇಕಾನಂದ ಸಭಾಭವನದಲ್ಲಿ ತಮ್ಮ ಕೈಚಳಕದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ. ಸುಮಾರು 20 ಮಳಿಗೆಯಲ್ಲಿ ವಿವಿಧ ವಿನ್ಯಾಸದ 4 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಅಲಂಕರಿಸಿ ಇಡಲಾಗಿದ್ದು, ಜನರು ಖರೀದಿಗೆ ಮುಗಿಬಿದ್ದಿದ್ದಾರೆ.
ಮೂರ್ತಿಗಳ ವೈವಿಧ್ಯತೆ ಜನರನ್ನು ಆಕರ್ಷಿಸುತ್ತಿದೆ. ಪದ್ಮಾಸನದಲ್ಲಿರುವ ಗಣಪತಿ, ಸಿಂಹಾಸನಾರೂಢ ಗಣೇಶ, ದಗಡು ಶೇಟ್ ವಿಗ್ನೇಶ, ಬಾಲಗಣೇಶ ಮುಂತಾದ ಭಾವಚಿತ್ರಗಳ ಮೂರ್ತಿಗಳು ವಿಶೇಷ ಮೆಚ್ಚುಗೆ ಗಳಿಸುತ್ತಿವೆ. ಜೊತೆಗೆ ಪ್ರಸಿದ್ಧ ಕೊಣ್ಣೂರು, ಲಕ್ಷ್ಮೇಶ್ವರ ಹಾಗೂ ಧಾರವಾಡ ಗಣಪತಿಗಳ ಪ್ರತಿರೂಪಗಳನ್ನೂ ಮಾರಾಟಕ್ಕೆ ಇಡಲಾಗಿದೆ. ಮೂರ್ತಿಗಳ ಗಾತ್ರ 9 ಇಂಚಿನಿಂದ 4.5 ಫೀಟ್ ವರೆಗೆ ಇದ್ದು, ಬೆಲೆ 200 ರೂ. ಇಂದ 10 ಸಾವಿರ ರೂ. ವರೆಗೆ ನಿಗದಿಪಡಿಸಲಾಗಿದೆ. ಹಬ್ಬದ ಉತ್ಸಾಹದಲ್ಲಿ ಜನರು ತಮಗೆ ತಾವೇ ಇಷ್ಟವಾದ ವಿನ್ಯಾಸದ ಮೂರ್ತಿಗಳನ್ನು ಖರೀದಿಸಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಪರಿಸರ ಸ್ನೇಹಿ ಮೂರ್ತಿಗಳ ತಯಾರಕರ ಸಂಘದ ಕಾರ್ಯದರ್ಶಿ ಮುತ್ತಣ್ಣ ಬರಡಿ ಮಾತನಾಡುತ್ತಾ, “ಕಳೆದ 10 ವರ್ಷಗಳಿಂದ ನಾವು ಪಿಯುಪಿ ಮೂರ್ತಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ. ಪರಿಸರದ ಹಿತದೃಷ್ಟಿಯಿಂದ ಜನರು ಮಣ್ಣಿನ ಮೂರ್ತಿಗಳನ್ನೇ ಆರಿಸಬೇಕು. ಅಲಂಕಾರಕ್ಕೂ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಿ, ಸಂಪೂರ್ಣ ಪರಿಸರ ಸ್ನೇಹಿ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸುವುದು ನಮ್ಮ ಆಶಯ” ಎಂದು ತಿಳಿಸಿದ್ದಾರೆ.
ಈ ಮೂರ್ತಿಗಳ ತಯಾರಿಕೆಯಲ್ಲಿ ಕಲಾವಿದರು ಬಹಳ ಶ್ರಮ ಹೂಡಿದ್ದು, ಮಣ್ಣಿನ ನೈಸರ್ಗಿಕ ಸೌಂದರ್ಯಕ್ಕೆ ವಿವಿಧ ಬಣ್ಣಗಳ ಹಚ್ಚಳ ನೀಡಿ ಆಕರ್ಷಕವಾಗಿ ರೂಪಿಸಿದ್ದಾರೆ. ಹಬ್ಬದ ಸಂಭ್ರಮಕ್ಕೆ ತಕ್ಕಂತೆ ಸಣ್ಣ ಮಕ್ಕಳು, ಕುಟುಂಬದವರು ಖರೀದಿ ಮಾಡುತ್ತಿದ್ದಾರೆ.
ಪರಿಸರದ ಮೇಲೆ ಮೂರ್ತಿಗಳ ಪ್ರಭಾವವನ್ನು ಕಡಿಮೆ ಮಾಡಲು ಹಾಗೂ ಸ್ಥಳೀಯ ಕಲಾವಿದರಿಗೆ ಆರ್ಥಿಕ ಬೆಂಬಲ ನೀಡುವ ಈ ಕ್ರಮ ಶ್ಲಾಘನೀಯವಾಗಿದೆ. ಪರಿಸರ ಸ್ನೇಹಿ ಮೂರ್ತಿಗಳ ಬಳಕೆಯ ಮೂಲಕ ಹಬ್ಬದ ಖುಷಿ, ಪರಂಪರೆ ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಶುದ್ಧ ಪರಿಸರವನ್ನು ಬಿಟ್ಟುಕೊಡುವುದೇ ಈ ಅಭಿಯಾನದ ಗುರಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP