ಸ್ವ ಉದ್ಯೋಗವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕ
ಸ್ವ ಉದ್ಯೋಗವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕ
ಚಿತ್ರ : ಕೋಲಾರ ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಡಾ.ಪ್ರವೀಣ್ ಪಿ. ಬಾಗೇವಾಡಿ ಮಾತನಾಡಿದರು.


ಕೋಲಾರ, ೨೬ ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಅವುಗಳ ಬಗ್ಗೆ ಆಲೋಚಿಸುತ್ತ ಕೂರುವ ಬದಲು, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದಾಗಲೇ ಜೀವನಕ್ಕೊಂದು ಅರ್ಥ ಬರುತ್ತದೆ ಎಂದು ಜಿ.ಪಂ ಸಿಇಓ ಡಾ.ಪ್ರವೀಣ್ ಪಿ ಬಾಗೇವಾಡಿ ಹೇಳಿದರು.

ಕೋಲಾರ ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸಿಸಿಟಿವಿ ಇನ್ಸ್ಟಾಲೇಶನ್ ಮತ್ತು ಸರ್ವೀಸ್ ಹಾಗೂ ಲಘು ವಾಹನಾ ಚಾಲನಾ ತರಬೇತಿ ಮತ್ತು ಎಂಬ್ರಾಯಿಡರಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮಹಿಳೆಯರು ಕೂಡ ಶಿಕ್ಷಣ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ರಂಗಗಳಲ್ಲೂ ಸಾಧನೆ ಮಾಡಿದ್ದಾರೆ. ಸ್ವ ಉದ್ಯೋಗದಲ್ಲೂ ಕೂಡ ಅಭಿವೃದ್ದಿಯಾಗಲು ಮಹಿಳೆಯರಿಗೆ ಹಲವು ಅವಕಾಶಗಳಿವೆ. ಶ್ರದ್ದೆ, ಆಸಕ್ತಿ, ಶ್ರಮ ಇದ್ದರೆ ಸಾಧನೆ ಮಾಡಲು ಕಷ್ಟವಲ್ಲ ಎಂದು ಅಭಿಪ್ರಾಯಪಟ್ಟರು.

ಸ್ವ ಉದ್ಯೋಗವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಕ್ಷೇತ್ರ. ಮಾರುಕಟ್ಟೆ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತಹ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸಿದರೆ ಆರ್ಥಿಕವಾಗಿ ಲಾಭ ಮಾಡಬಹುದು ಎಂದು ಸಲಹೆ ನೀಡಿದರು.

ಸಿಸಿಟಿವಿ, ಎಂಬ್ರಾಯಿಡರಿ ಮತ್ತು ಲಘುವಾಹನಾ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳು, ಆ ವೃತ್ತಿಗಳಲ್ಲಿ ಬೆಳೆಯಲು ಸದಾ ಕಾಲ ಪ್ರಯತ್ನಿಸಬೇಕೆ ಹೊರತು ಸಾಧನೆ ಮಾಡುವ ಛಲವನ್ನು ಅರ್ಧದಲ್ಲಿ ಕೈ ಬಿಡಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹದೇವ್ ಜೋಶಿ ಮಾತನಾಡಿ, ಸ್ವ ಉದ್ಯೋಗ ಆರಂಭಿಸಲು ಆಸಕ್ತಿ ಇರುವವರಿಗೆ ಪಿಎಂಇಜಿಪಿ, ಮುದ್ರಾ ಸೇರಿದಂತೆ ವಿವಿಧ ನಿಗಮಗಳ ಮೂಲಕ ಹಲವು ಯೋಜನೆಗಳು ಜಾರಿಯಲ್ಲಿದ್ದು, ಇವುಗಳನ್ನು ಬಳಸಿಕೊಂಡು ಸ್ವ ಉದ್ಯೋಗ ಆರಂಭಿಸಬಹುದು ಎಂದು ತಿಳಿಸಿದರು.

ತರಬೇತಿ ಸಂಸ್ಥೆಯ ನಿರ್ದೇಶಕ ಯಲ್ಲೇಶ್ ಸಿ ಮಾತನಾಡಿ, ಮಹಿಳೆಯರು ಯಾವುದೇ ಕಾರಣಕ್ಕೂ ಕೀಳರಿಮೆ ಪಡದೆ ಅಂದುಕೊಂಡ ಗುರಿ, ಸಾಧನೆ ಮಾಡುವ ಕಡೆ ಮಾತ್ರ ಮನಸ್ಸಿನ ಗಮನವನ್ನು ಕೇಂದ್ರಿಕರಿಸಬೇಕು ಎಂದು ಹೇಳಿದರು.

ಆರ್ಸೆಟಿ ತರಬೇತಿ ಸಂಸ್ಥೆಯು ಹಲವು ದಶಕಗಳಿಂದಲೂ ಕೂಡ ಮಹಿಳೆಯರ ಸ್ವಾವಲಂಭಿ ಜೀವನಕ್ಕಾಗಿ ಹಲವು ಸ್ವ ಉದ್ಯೋಗಧಾರಿತ ತರಬೇತಿಗಳನ್ನು ಊಟ, ವಸತಿಯೊಂದಿಗೆ ಉಚಿತವಾಗಿ ನೀಡುತ್ತ ಬರುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತರಬೇತುದಾರರಾದ ಕೆ.ವಿ ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಮಂಜುನಾಥ್ ಬಿ, ಜಿ.ಆರ್. ಸಿಂಧೂಜ, ಎನ್.ವಿ ನಾರಾಯಣಸ್ವಾಮಿ, ಅರ್ಪಿತ ಯು.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಡಾ.ಪ್ರವೀಣ್ ಪಿ. ಬಾಗೇವಾಡಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande