ಕೋಲಾರ, ೨೬ ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಕ್ಕಳ ಸಾಧನೆಗೆ ಆತ್ಮವಿಶ್ವಾಸ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳ ಓದಿನ ಜೊತೆಗೆ ಕರಾಟೆ ಕಲೆ ಸೇರಿದಂತೆ ಇನ್ನಿತರೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವುದರ ಮೂಲಕ ಪರಿಪೂರ್ಣತೆ ಹೊಂದಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.
ಬ್ರೂಸ್ಲಿ ಕರಾಟೆ ಶಾಲೆಯ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಆತ್ಮರಕ್ಷಣೆಗಾಗಿ ಕರಾಟೆ ಕಲೆಯನ್ನು ಕಲಿಯವುದು ಬಹಳ ಮುಖ್ಯ ಅದರಲ್ಲೂ ಹೆಣ್ಣುಮಕ್ಕಳು ಕರಾಟೆ ಕಲೆಯತ್ತ ಹೆಚ್ಚು ಒಲವು ತೋರಬೇಕೆಂದರು.
ಪೋಷಕರು ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಅಭಿರುಚಿಯನ್ನು ಗುರುತಿಸಿ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೋಷಕರು ಮೆಟ್ಟಿಲುಗಳಾಗಬೇಕು ಆಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಕ್ರೀಡೆಗಳಿಂದ ಮಕ್ಕಳ ದೈರ್ಯ ಮತ್ತು ಆತ್ಮಸ್ತೈರ್ಯ ಇನ್ನಷ್ಟು ವೃದ್ಧಿಗೊಳ್ಳುತ್ತದೆ. ಮಕ್ಕಳನ್ನು ಯಾವುದೇ ಸಂದರ್ಭದಲ್ಲೂ ಕುಗ್ಗಿಸುವ ಕೆಲಸ ಮಾಡಬಾರದು ಪೋಷಕರು ಜೊತೆಗೆ ಶಾಲೆಗಳಲ್ಲೂ ಸಹ ಮಕ್ಕಳನ್ನು ಪ್ರೋತ್ಸಾಹಿಸಿ ಸಾಧನೆ ಮಾಡಲು ಪ್ರೇರೇಪಿಸಬೇಕೆಂದು ಕರೆ ನೀಡಿದರು.
ವಕೀಲ ವೆಂಕಟಾಚಲಪತಿ ಮಾತನಾಡಿ, ಜಿಲ್ಲಾಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅವರ ಪ್ರತಿಯೊಂದು ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡಿದೇ ಆದಲ್ಲಿ ಸಾಧನೆಗೆ ದಾರಿದೀಪವಾಗಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬ್ರೂಸ್ಲಿ ಕರಾಟೆ ಶಾಲೆಯ ಸಂಸ್ಥಾಪಕ ಹಾಗೂ ಚಲನಚಿತ್ರ ನಟ ಕರಾಟೆ ಶ್ರೀನಿವಾಸ್, ಸಂಸ್ಥೆಯನ್ನು ಹುಟ್ಟು ಹಾಕಿ ಸುಮಾರು ೨೫ ವರ್ಷಗಳಿಂದ ಕರಾಟೆ ಕಲೆಯನ್ನು ಮಕ್ಕಳಿಗೆ ಕಲಿಸಿಕೊಡುತ್ತ ಬರುತ್ತಿದ್ದೇನೆ. ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಮಕ್ಕಳಿಗೆ ಆತ್ಮ ರಕ್ಷಣೆಗಾಗಿ ಕರಾಟೆ ಕಲೆ ತರಬೇತಿ ನೀಡುತ್ತಿದ್ದು, ಇದರಲ್ಲಿ ನನಗೆ ಅತ್ಮತೃಪ್ತಿ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬ್ರೂಸ್ಲಿ ಕರಾಟೆ ಶಾಲೆಯ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತ ಕ್ರೀಡಾಪಟುಗಳಾದ ಸಿಯಾನೋ ಜಾನ್, ವಂಶಿಕೃಷ್ಣ, ಕೌಶಿಕ್ ವಿನೋದ್, ಅಂಜುಶ್ರೀ, ಕವನಶ್ರೀ, ಮಹಮ್ಮದ್ ಉಯಜ್, ಅಖಿಲೇಶ್, ಮನ್ವಿತಾ, ದೀಪ್ತಿಗೌಡ, ರೇವಂತ್, ಅಖಿಲ್
ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಸುಬ್ರಮಣಿ, ವಿನೋದ್, ಅಂಬೇಡ್ಕರ್ ಮಹಾ ನಾಯಕ ಸಂಘದ ಅಧ್ಯಕ್ಷ ಸಾಮ್ರಾಟ್ ಸುಬ್ಬು, ವಕೀಲ ಮಂಜುನಾಥ್ ಬಿ, ಸುವರ್ಣ ಸೆಂಟ್ರಲ್ ಶಾಲೆಯ ಪುರುಷೋತ್ತಮ್, ಪರಮೇಶ್, ಸುಗಟೂರು ಮೂರ್ತಿ, ಯುವರಾಜ್, ಕಣ್ಣನ್ ಉಪಸ್ಥಿತರಿದ್ದರು. ರೇಣುಕಾ ಮಣಿ ನಿರೂಪಿಸಿ, ವಂದಿಸಿದರು.
ಚಿತ್ರ : ಬ್ರೂಸ್ಲಿ ಕರಾಟೆ ಶಾಲೆಯ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಆರ್.ರವಿ ಉದ್ಘಾಟಿಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್