ಕೊಪ್ಪಳ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿಗೆ ಸಂಬಂಧಿಸಿದಂತೆ ನಾನಾ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.
ನಿಗಮದಿಂದ ಸ್ವಯಂ ಉದ್ಯೋಗ ಯೋಜನೆ/ನೇರಸಾಲ ಯೋಜನೆ(ಸಹಾಯಧನ ರೂ.50000/- ಸಾಲ, ರೂ.50000, ಒಟ್ಟು ಘಟಕ ವೆಚ್ಚ 1,00,000/-), ಹೈನುಗಾರಿಕೆ ಯೋಜನೆ(ಸಹಾಯಧನ ರೂ.1,25000/-, ಬ್ಯಾಂಕ್‍ಗಳ ಸಹಯೋಗದೊಂದಿಗೆ), ಉದ್ಯಮ ಶೀಲತಾ ಯೋಜನೆ(ಸಹಾಯಧನ ರೂ.2 ಲಕ್ಷ, ಬ್ಯಾಂಕ್‍ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆ(ಸಹಾಯಧನ ರೂ.4 ಲಕ್ಷ, ಬ್ಯಾಂಕ್‍ಗಳ ಸಹಯೋಗದೊಂದಿಗೆ), ಮೈಕ್ರೋ ಕ್ರೆಡಿಟ್ ಯೋಜನೆ(ಸಹಾಯಧನ ರೂ.2,50,000/-, ಸಾಲ ರೂ.2,50,000/-, ಒಟ್ಟು ಘಟಕ ವೆಚ್ಚ ರೂ.5,00,000/-), ಗಂಗಾಕಲ್ಯಾಣ ಯೋಜನೆ(1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆಬಾವಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು), ಭೂ ಒಡೆತನ ಯೋಜನೆ(ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಿ ನೀಡಲಾಗುವುದು) ಯೋಜನೆಗಳಿಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ ಕನಿಷ್ಟ 15 ವರ್ಷ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1,50,000/- ಹಾಗೂ ನಗರ ಪ್ರದೇಶವಾದಲ್ಲಿ ರೂ. 2 ಲಕ್ಷ ಮಿತಿಯೊಳಗಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ನೇರವಾಗಿ ಅಥವಾ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳ ಮೂಲಕ ಸೆಪ್ಟೆಂಬರ್ 17 ರೊಳಗೆ ಆನ್‍ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಅರ್ಜಿದಾರರು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳನ್ನೊಳಗೊಂಡ ಪಾಸ್‍ಬುಕ್‍ನ ಮೊದಲ ಪುಟದ ಪ್ರತಿ, ಸಣ್ಣ ಹಿಡುವಳಿ (ಗಂಗಾಕಲ್ಯಾಣ ಯೋಜನೆ)ಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
2023-24 ಮತ್ತು 2024-25 ನೇ ಸಾಲಿನಲ್ಲಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮೊತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಚೇರಿಗೆ ಸಂಪರ್ಕಿಸಬಹುದು ಎಂದು ನಿಗಮದ ತಿಳಿಸಿದೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್