ಕೊಪ್ಪಳ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳ ಕಛೇರಿ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಆಗಸ್ಟ್ 26 ರಂದು ತಾಲೂಕಾ ಮಟ್ಟದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳಾದ ಡಾ. ಪ್ರಕಾಶ ಹೆಚ್. ಇವರು ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡುವ ಕಾರ್ಯವನ್ನು ಉತ್ತೇಜಿಸಿ, ಜಾಗೃತಿ ಮೂಡಿಸುವುದಾಗಿದೆ.
ಇದು ಸಂಪೂರ್ಣವಾಗಿ ಒಂದು ದಾನದ ಕೆಲಸವಾಗಿದ್ದು, ಸಮಾಜದ ಪ್ರಯೋಜನಕ್ಕಾಗಿದೆ ಮತ್ತು ಇದು ಸಂಪೂರ್ಣ ಸ್ವ-ಇಚ್ಛೆಯಿಂದ ಕೂಡಿದೆ. ಸಾಧಾರಣ ಕಣ್ಣಿನ ದೃಷ್ಠಿ ಇಲ್ಲದವರಿಗೆ ಮತ್ತು ದಿನದ ಬೆಳಕನ್ನು ಎಂದೂ ನೋಡಿರಲಾರದ ಅಂಧರಿಗೆ ದೃಷ್ಠಿ ನೀಡುವ ಅತ್ಯಂತ ಮಹತ್ವದ ಕೆಲಸವಾಗಿದೆ. ದಾನ ಮಾಡಲಾದ ಪ್ರತಿಯೊಂದು ಜೋಡಿ ಕಣ್ಣುಗಳಿಂದ ಇಬ್ಬರು ಅಂಧ ವ್ಯಕ್ತಿಗಳು ದೃಷ್ಠಿಯನ್ನು ಮತ್ತು ಅವರ ಜೀವನದಲ್ಲಿ ಬೆಳಕನ್ನು ಪಡೆಯುತ್ತಾರೆ.
ಈ ಕಾರ್ಯ ನಿಜಕ್ಕೂ ಮಹತ್ತರವಾದದ್ದು. ನೇತ್ರದಾನದ ಪ್ರಾಮುಖ್ಯತೆ ಮತ್ತು ಮಹತ್ವಕ್ಕೆ ಹೆಚ್ಚು ಒತ್ತು ನೀಡಲು ಮತ್ತು ಅದರ ಪ್ರಯೋಜವನ್ನು ಸಮುದಾಯಲ್ಲಿರುವ ಅಂಧರಿಗೆ ಒದಗಿಸಲು ದೇಶಾದ್ಯಂತ ವಿವಿಧ ಪಟ್ಟದಲ್ಲಿ ಸರ್ಕಾರಿ, ಖಾಸಗಿ ಸಂಘಟನೆಗಳು, ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಇತರ ಪಾಲುದಾರರು ಈ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡು, ಅರಿವು ಮೂಡಿಸಲಾಗುತ್ತದೆ. ಎಲ್ಲಾ ದಾನಕ್ಕಿಂತ ನೇತ್ರದಾನ ಮಾಹಾದಾನವಾಗಿದೆ. ನಿಮ್ಮ ನೇತ್ರಗಳು ಸದಾ ಜೀವಂತವಾಗಿರಲಿ ನೇತ್ರದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ರಾಮಾಂಜನೇಯ ಅವರು ಮಾತನಾಡಿ, ಅಂಗಾಂಗ ದಾನ ಮಹಾದಾನ. ಮೆದುಳು ನಿಷ್ಕ್ರಿಯಗೊಂಡ ಒಬ್ಬ ಮನುಷ್ಯನ ಅಂಗಾಂಗಗಳು 8 ಜನರ ಜೀವನಕ್ಕೆ ಬೆಳಕಾಗುತ್ತವೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಾರ್ನಿಯ ದಾನ ಮತ್ತು ಕಸಿ ಕುರಿತು ಜಾಗೃತಿ ಮೂಡಿಸುವುದು ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 5,600 ಕಣ್ಣುಗಳನ್ನು ದಾನ ಮಾಡಲಾಗುತ್ತದೆ.
ದೇಶಾದ್ಯಂತ 1.25 ಲಕ್ಷ ಜನರು ನೇತ್ರದಾನಿಗಳಾಗಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ 48 ಕಣ್ಣಿನ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 8 ಬ್ಯಾಂಕ್‍ಗಳು ಸರ್ಕಾರಿ ವಲಯಗಳಲ್ಲಿವೆ. ಯಾವುದೇ ವಯಸ್ಸು, ಲಿಂಗ, ಧರ್ಮ ಅಥವಾ ರಕ್ತದ ಗುಂಪಿನ ಬೇಧವಿಲ್ಲದೆ ಯಾರಾದರೂ ಕಣ್ಣುಗಳನ್ನು ದಾನ ಮಾಡಬಹುದು. ಕಣ್ಣುಗಳ ಸಂಗ್ರಹಕ್ಕೆ ಕೆವಲ 20 ನಿಮಿಷ ಬೇಕಾಗುತ್ತದೆ ಮತ್ತು ಇದು ಮುಖದ ಚಹರೆಯನ್ನು ಬದಲಿಸುವುದಿಲ್ಲ.
ಮರಣದ ಆರು ಗಂಟೆಯೊಳಗೆ ಕಣ್ಣುಗಳನ್ನು ಸಂಗ್ರಹಿಸಬೇಕು, ಮರಣದ ನಂತರ ಮಾತ್ರ ದಾನವನ್ನು ಮಾಡಲು ಸಾಧ್ಯ. ನಮ್ಮ ಮರಣದ ನಂತರವೂ ನಮ್ಮ ಕಣ್ಣುಗಳು ಇತರರಿಗೆ ಸಹಾಯವಾಗಲೆಂದು ತಿಳಿಸಿದರು. ಧೂಮಪಾನ, ಮದ್ಯಪಾನ ಹಾಗೂ ಆಲ್ಕೋಹಾಲ್ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಈ ವಿಷಯದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗವಿಸಿದ್ದೇಶ್ವರ ಆರ್ಯುವೇದಿಕ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ಅವರು ಮಾತನಾಡಿ, ನೇತ್ರದಾನ ಮಾಡುವುದು ಮತ್ತು ಮಾಡಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ. ಇಲಾಖೆಗಳು ಜಾಗೃತಿ ಮೂಡಿಸಿದರೆ ಸಾಲದು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಂದ ನಿರಂತರ ಅರಿವು ಮೂಡಿಸಬೇಕು. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತವಾಗಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ, ನ.ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಶ ಉಮಚಗಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಕಲಾ, ಡಾ. ಅನಿತಾ, ಡಾ. ಗುರುರಾಜ, ಡಾ. ಪ್ರೀತಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್