ಗದಗ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರದಿಂದ ಈ ಕೆಳಕಂಡ ಸೌಲಭ್ಯಗಳಿದ್ದು ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಅಲೆಮಾರಿ/ ಅರೆ ಅಲೆಮಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ : ಅಲೆಮಾರಿ / ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದರ ಮೂಲಕ ಮಧ್ಯದಲ್ಲಿ ಶಾಲೆ ಬಿಡುವವರ ಪ್ರಮಾಣ ಕಡಿಮೆ ಮಾಡಲು ಹಾಗೂ ಶಿಕ್ಷಣ ಹಂತ ಮುಂದುವರೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ಮೆಟ್ರಿಕ್ ಪೂರ್ವ ಶಿಷ್ಯವೇತನ : 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 200 ರೂ.ಗಳಂತೆ 10 ತಿಂಗಳು ನೀಡಲಾಗುತ್ತದೆ.
ಅರ್ಹತೆಗಳು: ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿರಬೇಕು. ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.2.00 ಲಕ್ಷ , ಹಿಂದಿನ ವರ್ಷದಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು. ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಸಲ್ಲಿಸಬೇಕಾದ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ಅಂಕ ಪಟ್ಟಿ , ಆನ್ ಲೈನ್ ನಲ್ಲಿ ಶಾಲಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಆಯಾ ಶಾಲಾ ಮುಖ್ಯೋಪಾಧ್ಯಾಯರು/ ತಾಲೂಕು ಬಿ.ಇ.ಓ/ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಅಲೆಮಾರಿ/ ಅರೆ ಅಲೆಮಾರಿ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ : ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಶಿಕ್ಷಣವನ್ನು ಮುಂದುವರೆಸಲು ಆರ್ಥಿಕ ನೆರವು ನೀಡುವುದರ ಮೂಲಕ ಮಧ್ಯದಲ್ಲಿ ಕಾಲೇಜು ಬಿಡುವವರ ಪ್ರಮಾಣ ಕಡಿಮೆ ಮಾಡಲು ಹಾಗೂ ಈ ಶಿಕ್ಷಣ ಹಂತ ಮುಂದುವರೆಸುವ ಉದ್ದೇಶದಿಂದ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ಮೆಟ್ರಿಕ್ ನಂತರ ಶಿಷ್ಯವೇತನ : ಪಿಯುಸಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 300 ರೂ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 400 ರೂ, ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಬಿಇ ಎಂ, ಬಿ.ಬಿ.ಎಸ್, ಬಿ.ಡಿ.ಎಸ್. ತತ್ಸಮಾನವಾದ ಇನ್ನಿತರ ತಾಂತ್ರಿಕ / ವೃತ್ತಿಪರ ಕೋರ್ಸುಗಳಿಗೆ 500 ರೂ. 10 ತಿಂಗಳು ನೀಡಲಾಗುತ್ತಿದೆ.
ಅರ್ಹತೆಗಳು: ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿರಬೇಕು. ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.2.50 ಲಕ್ಷ ರೂ.ಒಳಗಿರಬೇಕು. ಹಿಂದಿನ ವರ್ಷದಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು. ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಇನ್ನಾವುದೇ ವಿದ್ಯಾರ್ಥಿ ವೇತನ ಅಥವಾ ಉಚಿತ ವಸತಿ ನಿಲಯದಲ್ಲಿ ಪ್ರವೇಶ ಪಡೆದಿರಬಾರದು.
ಸಲ್ಲಿಸಬೇಕಾದ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ಅಂಕಪಟ್ಟಿ, ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಆಯಾ ತಾಲೂಕಾ ಹಿಂದುಳಿದ ವರ್ಗಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ನಿವೇಶನ ಹಂಚಿಕೆಗಾಗಿ ಜಮೀನು ಖರೀದಿ : ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ಹೆಚ್ಚಿನ ಕುಟುಂಬಗಳು ನಿವೇಶನವಿಲ್ಲದ ವಸತಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವರನ್ನು ಒಂದು ಕಡೆ ನೆಲೆ ನಿಲ್ಲುವಂತೆ ಮಾಡಲು ನಿವೇಶನವನ್ನು ಒದಗಿಸಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಿ ಜಮೀನನ್ನು ಗುರುತಿಸಿ ಹಂಚುವ ಉದ್ದೇಶದಿಂದ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ಅಲೆಮಾರಿ ಜನಾಂಗದವರಿಗೆ ನಿವೇಶನರಹಿತರಿಗೆ ಸರ್ಕಾರದಿಂದ ಉಚಿತವಾಗಿ ನಿವೇಶನ ಒದಗಿಸುವುದು. ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿರಬೇಕು. ಅಭ್ಯರ್ಥಿಯ ಹೆಸರಿನಲ್ಲಿ ನಿವೇಶನ ಇರಬಾರದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆಯಾ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾದಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ: ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗಾಗಿ ನಿವೇಶನ ರಹಿತರಿಗೆ ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿರುವವರಿಗೆ ನಿರ್ದಿಷ್ಟ ನೆಲೆಯಿಲ್ಲದೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವವರಿಗೆ ಒಂದೆ ಕಡೆ ನೆಲೆ ನಿಲ್ಲುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಸೌಲಭ್ಯಗಳು: ವಸತಿ ರಹಿತ ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿವೇಶನ ರಹಿತರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಮನೆಗಳನ್ನು ಒದಗಿಸಲಾಗುವುದು.
ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿರಬೇಕು. ಅಭ್ಯರ್ಥಿಯ ಹೆಸರಿನಲ್ಲಿ ನಿವೇಶನ ಇರಬಾರದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಥವಾ ಆಯಾ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP