ರಾಯಚೂರು, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಆಗಸ್ಟ್ 25ರಂದು ಹಬ್ಬದ ಸಂಭ್ರಮ ಕಾಣುತ್ತಿದೆ. ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳನ್ನು ಉತ್ತೇಜಿಸುವ ಆಕಾಂಕ್ಷ ಹಾತ್ ಕಾರ್ಯಕ್ರಮದಡಿ ಉದ್ಯಾನವನದಲ್ಲಿ ಸುಮಾರು 23 ಸ್ಟಾಲ್‍ಗಳನ್ನು ಹಾಕಲಾಗಿದ್ದು, ಬಗೆಬಗೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಜನಮನ ಸೆಳೆಯುತ್ತಿದೆ.
ಮೊದಲ ದಿನ ಬೆಳಗ್ಗೆಯಿಂದ ಸಂಜೆ ವೇಳೆಗೆ ಸುಮಾರು 2500ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಮಹತ್ವಾಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ದೇಶದ ಆರ್ಥಿಕತೆಯಲ್ಲಿ ಹಾಗೂ ಸದೃಢ ದೇಶ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಮನೆಯಲ್ಲಿ ಉತ್ಪಾದನೆ ಮಾಡಿದ ದೇಶಿ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕೆಂದರು. ಮಹಿಳೆಯರು ತಮ್ಮ ಮನೆಯಲ್ಲಿನ ಡಬ್ಬಿಗಳಲ್ಲಿ ಕೂಡಿಡುವ ಅಲ್ಪ ಹಣವೇ ಅವರಿಗೆ ಅವಶ್ಯಕ ಸಂದರ್ಭದಲ್ಲಿ ಸಹಾಯಕ ಬರುತ್ತದೆ.
ಮಹಿಳೆಯರು ಕೆಲ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡಿದಲ್ಲಿ ಕುಟುಂಬ ನಡೆಸಲು ಅನುಕೂಲವಾಗುತ್ತದೆ. ಮನೆಯಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಬೇರೆಯವರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕೊರಗು ಇದೆ. ಇಂತಹ ಮೇಳಗಳ ಮೂಲಕ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಬ್ರಾಂಡ್ ಮಾಡಿಕೊಂಡು ಹೆಸರುವಾಸಿಯಾಗಬೇಕು ಎಂದರು.
ಇಂದಿನಿಂದ ಆಗಸ್ಟ್ 30ರವರೆಗೆ ಸುಮಾರು ಒಂದು ವಾರಗಳ ಕಾಲ ನಡೆಯುವ ಮೇಳದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹೆಚ್ಚು ಗ್ರಾಹಕರನ್ನು ಸೆಳೆಯಬೇಕು. ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕು. ಸ್ವಯಂ ಉದ್ಯಮಿಗಳಾಗಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋμï ರಾಣಿ ಅವರು ಮಾತನಾಡಿ, ದೇಶದ ಶೇ.60ರಷ್ಟು ಆರ್ಥಿಕ ಶಕ್ತಿಯು ಅದು ಮನೆಮನೆಗಳಿಂದಲೇ ಸಾಧ್ಯಾಗುತ್ತಿದೆ. ಮನೆಯಲ್ಲಿಯೇ ಉತ್ಪಾದನೆ ಮಾಡುವ ಉತ್ಪನ್ನಗಳಿಗೆ ಬ್ರಾಂಡ್ ಇಲ್ಲದೇ ಇರುವುದರಿಂದ ಮಾರಾಟ ವ್ಯವಸ್ಥೆ ಸವಾಲಿನಂತಾಗಿರುತ್ತದೆ.
ಉತ್ಪನ್ನಕ್ಕೆ ಒಂದು ಹೆಸರು ಕೊಟ್ಟು ಇಂತಹ ಮೇಳದಲ್ಲಿ ಪರಿಚಯಿಸಬೇಕು. ಮಹಿಳೆಯರು ಉತ್ತಮ ಅಡುಗೆ ಕೌಶಲ್ಯ ಬೆಳೆಸಿಕೊಂಡು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದಲ್ಲಿ ಉತ್ತಮ ರೀತಿಯ ಮಾರುಕಟ್ಟೆ ಸಿಕ್ಕು ಸ್ವಾವಲಂಬಿಗಳಾಗಿ ಆರ್ಥಿಕ ಸದೃಢರಾಗಲು ಸಾಧ್ಯವೆಂದರು.
ಈ ವೇಳೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ ಅವರು ಮಾತನಾಡಿ, ದೇಶದಲ್ಲಿನ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ಸ್ಥಳೀಯ ಮತ್ತು ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೇಳಗಳನ್ನು ನೀತಿ ಆಯೋಗದ ಮೂಲಕ ನಡೆಸಲಾಗುತ್ತಿದೆ. ಒಂದು ವಾರಗಳ ಕಾಲ ನಡೆಯುವ ಈ ಮೇಳದಲ್ಲಿ ಸ್ವ-ಸಹಾಯ ಗುಂಪುಗಳಿಂದ ತಯಾರಿಸಿದ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಗ್ರಾಮೀಣ ಮಟ್ಟದಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಒಂದು ವೇದಿಕೆ ಮೂಲಕ ಅವುಗಳನ್ನು ಪರಿಚಯಿಸುವ ಮೂಲಕ ಸ್ಥಳೀಯ ಉತ್ಪನ್ನಗಳ ಮಾರಾಟ ಮಾಡಲು ಅವಕಾಶ ದೊರೆತಿದೆ. ಮಹಿಳೆಯರು ಶ್ರಮ ವಹಿಸಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ವಯಂ ಉದ್ಯೋಗಿಗಳಬೇಕೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಧಿಕಾರಿ ಜಿ.ಯು.ಹುಡೇದ್, ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ, ಸ್ವ-ಸಹಾಯ ಗುಂಪುಗಳ ತಾಲೂಕು ಅಧ್ಯಕ್ಷೆ ಲಲಿತಾ ಸೇರಿದಂತೆ ಇಲಾಖೆಯಗಳ ಅಧಿಕಾರಿಗಳು, ಸ್ವ-ಸಹಾಯ ಗುಂಪುಗಳ ಮಹಿಳೆಯರು ಮೇಳದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್