ಬರ್ಲಿನ್, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮುಂದಿನ ವರ್ಷಗಳಲ್ಲಿ ಜರ್ಮನಿಯು ಹೊಸ ವ್ಯಾಪಾರ ಪಾಲುದಾರರನ್ನು ಹುಡುಕಬೇಕಿದೆ ಎಂದು ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ತಿಳಿಸಿದ್ದಾರೆ. ಅಮೆರಿಕ–ಯುರೋಪಿಯನ್ ಒಕ್ಕೂಟ ನಡುವಿನ ಇತ್ತೀಚಿನ ಒಪ್ಪಂದದ ಪ್ರಕಾರ ಯುರೋಪಿಯನ್ ಸರಕುಗಳ ಮೇಲೆ 15% ಸುಂಕ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
“ಅಮೆರಿಕ WTO ನಿಯಮಗಳನ್ನು ಪಾಲಿಸಲು ಸಿದ್ಧವಿಲ್ಲದಿದ್ದರೆ ಜಾಗತಿಕ ವ್ಯಾಪಾರವನ್ನು ನಾವು ಹೇಗೆ ಮುಂದುವರಿಸಬೇಕು? ನಮ್ಮ ಅಭಿಪ್ರಾಯ ಹಂಚಿಕೊಳ್ಳುವ ರಾಷ್ಟ್ರಗಳನ್ನು ನಾವು ಹುಡುಕಬೇಕು” ಎಂದು ಮೆರ್ಜ್ ಹೇಳಿದರು. ದಕ್ಷಿಣ ಅಮೆರಿಕಾ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೊಸ ಮಾರುಕಟ್ಟೆಗಳನ್ನು ಜರ್ಮನಿ ಅನ್ವೇಷಿಸಬೇಕೆಂದು ಅವರು ಹೇಳಿದರು.
ಅಮೆರಿಕದೊಂದಿಗೆ ಉತ್ತಮ ಆರ್ಥಿಕ ಸಂಬಂಧ ಉಳಿಸಿಕೊಂಡರೂ, ನಿರಂತರವಾಗಿ ಹೊಸ ಅವಕಾಶಗಳತ್ತ ಸಾಗಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ, ದೇಶದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಸುಸ್ಥಿರತೆ ಕುರಿತು ಮೆರ್ಜ್ ಕಳವಳ ವ್ಯಕ್ತಪಡಿಸಿದರು. ಉದ್ಯೋಗ, ಪಿಂಚಣಿ ಮತ್ತು ಆರೋಗ್ಯ ವೆಚ್ಚವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಜುಲೈ 28ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ನಡುವೆ ವ್ಯಾಪಾರ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರ ಅಡಿಯಲ್ಲಿ ಯುರೋಪಿಯನ್ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa