ಶ್ರೀರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಖ್ಯಾತ ಮೈಸೂರಿನ ಶಿಲ್ಪಿ ಮತ್ತೊಂದು ಪ್ರತಿಮೆ ಕೆತ್ತನೆಗೆ ಸಿದ್ದತೆ
ಗದಗ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಗತ್ತಿನ ಗಮನ ಸೆಳೆದ ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಖ್ಯಾತ ಮೈಸೂರಿನ ಶಿಲ್ಪಿ ಅರುಣ ಯೋಗಿ ಅವರಿಂದಲೇ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಲಿಂಗೈಕ್ಯ ರಂಭಾಪುರಿ ಜಗದ್ಗುರು ಶ್ರೀ ವೀರಗಂಗಾಧರ ಭಗವತ್ಪಾದರ ಬೃಹತ್ ಮೂರ್ತಿ ನಿರ್ಮಾಣಗೊಳ್ಳಲಿದೆ. ಈ
ಫೋಟೋ


ಗದಗ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಗತ್ತಿನ ಗಮನ ಸೆಳೆದ ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಖ್ಯಾತ ಮೈಸೂರಿನ ಶಿಲ್ಪಿ ಅರುಣ ಯೋಗಿ ಅವರಿಂದಲೇ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಲಿಂಗೈಕ್ಯ ರಂಭಾಪುರಿ ಜಗದ್ಗುರು ಶ್ರೀ ವೀರಗಂಗಾಧರ ಭಗವತ್ಪಾದರ ಬೃಹತ್ ಮೂರ್ತಿ ನಿರ್ಮಾಣಗೊಳ್ಳಲಿದೆ. ಈ ಸುದ್ದಿ ಭಕ್ತರಲ್ಲಿ ಸಂತೋಷ ಹಾಗೂ ಕುತೂಹಲ ಮೂಡಿಸಿದೆ.

ಲಿಂಗೈಕ್ಯ ವೀರಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗಗಳ ಸ್ಥಾಪನೆ ಕಾರ್ಯ ಭರದಿಂದ ನಡೆಯುತ್ತಿದೆ. ಶಿವಲಿಂಗಗಳ ಮಧ್ಯದಲ್ಲಿ 25 ಅಡಿ ಎತ್ತರದ ಜಗದ್ಗುರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸುವ ಯೋಜನೆ ರೂಪಿಸಲಾಗಿದೆ. ಈ ಪ್ರತಿಮೆ ಶಿಲ್ಪಕಲೆ ಹಾಗೂ ಧಾರ್ಮಿಕ ಭಕ್ತಿಯ ಅದ್ಭುತ ಸಂಕೇತವಾಗಲಿದೆ.

ಮೂರ್ತಿಯನ್ನು ಪ್ರಸಿದ್ಧ ಶಿಲ್ಪಿ ಅರುಣ ಯೋಗಿಯಿಂದಲೇ ಕೆತ್ತಿಸಬೇಕೆಂದು ನಿರ್ಧರಿಸಿ, ಶಿಲ್ಪಿಯನ್ನು ಸಂಪರ್ಕಿಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅರುಣ ಯೋಗಿ ಮುಕ್ತಿಮಂದಿರಕ್ಕೆ ಆಗಮಿಸಿ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ತ್ರಿಕೋಟಿ ಲಿಂಗ ಸ್ಥಾಪನೆಯ ಸ್ಥಳ ಹಾಗೂ ಮೂರ್ತಿಯ ನೀಲನಕ್ಷೆ ಪರಿಶೀಲಿಸಿದರು.

ಶಿಲ್ಪಿ ಅರುಣ ಯೋಗಿ ಮಾತನಾಡಿ, “ರಂಭಾಪುರಿ ಜಗದ್ಗುರುಗಳ ಮೂರ್ತಿಯನ್ನು ನಿರ್ಮಿಸುವ ಸೌಭಾಗ್ಯ ನನಗೆ ದೊರೆತಿರುವುದು ಶ್ರೀಗಳ ಕೃಪೆ. ಭಕ್ತಿಯಿಂದ ಹಾಗೂ ಪ್ರಾಮಾಣಿಕತೆಯಿಂದ ನಿರ್ಧಿಷ್ಟ ಅವಧಿಯಲ್ಲಿ ಮೂರ್ತಿಯನ್ನು ಸಿದ್ಧಪಡಿಸುತ್ತೇನೆ” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, “ಕಾಕತಾಳೀಯವೆಂದರೆ, ಅರುಣ ಯೋಗಿಯವರ ತಾತ ಬಸವಣ್ಣಾಚಾರ್ಯರು ಸುಮಾರು 60 ವರ್ಷಗಳ ಹಿಂದೆ ಮುಕ್ತಿಮಂದಿರದಲ್ಲೇ ಅನೇಕ ಮೂರ್ತಿಗಳನ್ನು ಕೆತ್ತಿದ್ದರು. ಈಗ ಅವರ ಮೊಮ್ಮಗನಿಂದಲೇ ಜಗದ್ಗುರುಗಳ ಮೂರ್ತಿ ನಿರ್ಮಾಣಗೊಳ್ಳುತ್ತಿರುವುದು ಮಹತ್ವದ ಸಂಗತಿ. ಇದು ಧರ್ಮ, ಪರಂಪರೆ ಮತ್ತು ಭಕ್ತಿಯ ಪ್ರತಿರೂಪವಾಗಿ ತಲೆಮಾರುಗಳಿಗೆ ಪ್ರೇರಣೆಯಾಗಲಿದೆ” ಎಂದು ತಿಳಿಸಿದರು.

ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ನಡೆಯುತ್ತಿರುವ ಈ ಶಿಲ್ಪಕಲಾ ಕಾರ್ಯದಿಂದ ತ್ರಿಕೋಟಿ ಲಿಂಗ ಹಾಗೂ ಜಗದ್ಗುರುಗಳ ಪ್ರತಿಷ್ಠಾಪನೆಯು ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆಸುವ ನಿರೀಕ್ಷೆ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande