ಕೋಲಾರ ೨೪ ಆಗಸ್ಟ್ (ಹಿ.ಸ) :
ಆ್ಯಂಕರ್ : ಭಾರತ ದೇಶವು ಬ್ರಿಟೀಷರ ದಬ್ಬಾಳಿಕೆಯಿಂದ ಬಿಡುಗಡೆಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಪೂರಕ ಶಕ್ತಿಯಾಗಿ ಕನ್ನಡ ಕವಿಗಳು ಮಿಡಿದದ್ದು ಚಾರಿತ್ರಿಕವಾದುದು. ಕನ್ನಡದ ಕಣ್ಣಲ್ಲಿ ಸ್ವಾತಂತ್ರ‍್ಯ ಎಂಬುದು ಬ್ರಿಟೀಷರಿಂದ ಮಾತ್ರ ಬಿಡುಗಡೆ ಎಂಬ0ತೆ ಏಕಮುಖಿಯಾಗಿ ಕಾಣಲಿಲ್ಲ. ಭಾರತದ ಐಕ್ಯತೆ ಹಾಗೂ ಸಮಾನತೆಗೆ ಪೂರಕವಾಗಿ ಬಹುಮುಖಿ ನೆಲೆಯಲ್ಲಿ ಸ್ವಾತಂತ್ರ‍್ಯ ಚಿಂತನೆಯನ್ನು ನಮ್ಮ ಕವಿಗಳು ಕಟ್ಟಿಕೊಟ್ಟಿದ್ದಾರೆ ಎಂದು ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಂಟಹಳ್ಳಿ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ವತಿಯಿಂದ ಕನ್ನಡದ ಕಣ್ಣಲ್ಲಿ ಸ್ವಾತಂತ್ರ‍್ಯ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಕವಿಗಳಾದ ಕುವೆಂಪು ಹಾಗೂ ದ.ರಾ.ಬೇಂದ್ರೆ ಅವರು ಭಾರತ ಸ್ವಾತಂತ್ರ‍್ಯಕ್ಕೆ ದೇಸೀಯ ಜನಸಮುದಾಯ ಹಾಗೂ ಯುವ ಸಮುದಾಯವನ್ನು ಸಜ್ಜುಗೊಳಿಸಲು ಅವಿರತವಾಗಿ ಶ್ರಮಿಸಿದರು. ಸ್ವಾತಂತ್ರ‍್ಯ ಪ್ರಜ್ಞೆಯನ್ನು ಬಿತ್ತಿದ ಕವಿತೆ ಬರೆದದ್ದಕ್ಕೆ ಬೇಂದ್ರೆ ಅವರು ಬ್ರಿಟೀಷರ ಕಂಗೆಣ್ಣಿಗೆ ಗುರಿಯಾದರು. ಕುವೆಂಪು ಅವರು ಸ್ವಾತಂತ್ರ‍್ಯ ಹಾಗೂ ಸಮಾನತೆಗಾಗಿ ನಿರ್ಭೀತವಾಗಿ ಹೋರಾಡಬೇಕಾದ ಕೆಚ್ಚನ್ನು ತುಂಬುವ0ತೆ ಕಾವ್ಯ ರಚನೆ ಮಾಡಿದರು. ನಡೆ ಮುಂದೆ ನಡೆಮುಂದೆ ಕುಗ್ಗದೆಯೆ ಹಿಗ್ಗದೆಯೆ ನುಗ್ಗಿ ನಢ ಮುಂದೆ ಎಂದು ಎಚ್ಚರಗೊಳಿಸಿದರು. ಗೋಪಾಲಕೃಷ್ಣ ಅಡಿಗರಂಥವರು ನವಭಾರತದ ನವಯುಗ ನಿರ್ಮಾಣಕ್ಕೆ ಬೇಕಾದ ಧೀರ ತರುಣರನ್ನು ಆಹ್ವಾನಿಸುವಂಥ ಆಶಯದ ಸಾಹಿತ್ಯ ಸೃಜಿಸಿದರು . ವಿಜಯಾದಬ್ಬೆ ಅಂತಹ ಕವಯಿತ್ರಿಯರು ಪುರುಷಯಾಜಮಾನ್ಯದ ಸಮಾಜದಲ್ಲಿ ಮಹಿಳೆಯರಿಗೆ ಇರಬೇಕಾದ ಸ್ವಾತಂತ್ರ ಕುರಿತು ಮನೋಜ್ಞವಾಗಿ ಅರಿವು ಮೂಡಿಸಿದರು. ಹೀಗೆ ಕನ್ನಡ ಕವಿಗಳು ಹೀಗೆ ನಿರೂಪಿಸಿರುವ ಬಹುಮುಖೀ ಸ್ವಾತಂತ್ರ‍್ಯ ಜಾಗೃತಿಯು ಇಂದಿಗೂ ಅವಶ್ಯಕವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಜಾಪ್ರಭುತ್ವ ಎಂಬ ಬಹುದೊಡ್ಡ ಮೌಲ್ಯವನ್ನು ನಾವು ಸ್ವೀಕರಿಸಿದ್ದೇವೆ, ಅದರಂತೆ ಬಾಳುತ್ತಿದ್ದೇವೆ. ಹಿಂದೆ ರಾಜಾಡಳಿತದ ಸರ್ವಾಧಿಕಾರಿ ಮೌಲ್ಯಕ್ಕೆ ಒಳಗಾಗಿದ್ದ ನಮಗೆ ಪ್ರಜಾಪ್ರಭುತ್ವವು ಹೊಸದು. ಪ್ರಜಾಪ್ರಭುತ್ವದ ಮೂಲ ಆಶಯವೇ ಸ್ವಾತಂತ್ರ‍್ಯ. ಪ್ರತಿಯೊಬ್ಬ ವ್ಯಕ್ತಿಯ ಜೀವನವಿಕಾಸಕ್ಕೆ ಸ್ವಾತಂತ್ರ‍್ಯ ಅತ್ಯಗತ್ಯ. ಸ್ವಾತಂತ್ರ‍್ಯವಿಲ್ಲದೆ ಯಾವುದೇ ವ್ಯಕ್ತಿಯಾಗಲೀ ಸಮುದಾಯವಾಗಲೀ ದೇಶವಾಗಲೀ ಸರ್ವತೋಮುಖವಾಗಿ ಉದ್ಧಾರವಾಗಲು ಸಾಧ್ಯವಿಲ್ಲ. ಅಡಿಗರೇ ಹೇಳುವಂತೆ ಸ್ವಾತಂತ್ರ‍್ಯ ಎಂಬುದು ರಾಜಕೀಯ ನೆಲೆಯಿಂದ ಬಾಹ್ಯಮುಖಿಯಾಗಿದ್ದರೆ, ನೈತಿಕ ನೆಲೆಯಿಂದ ಅಂತರಿಕವಾಗಿರುತ್ತದೆ. ಬಾಹ್ಯಸ್ವಾತಂತ್ರ‍್ಯದಿ0ದ ಬೀಗುವ ನಾವು ಆಂತರಿಕವಾಗಿ ನಮ್ಮನ್ನು ಹತ್ತಿಕ್ಕುವ ಜಾತಿ, ದುರಾಸೆ, ಭ್ರಷ್ಟತೆ, ಅಸೂಯೆ ಮೊದಲಾದ ಅನೈತಿಕ ನಿರ್ಬಂಧಗಳಿ0ದ ಸ್ವಾತಂತ್ರ‍್ಯರಾಗಬೇಕಿದೆ. ನಿಜಕ್ಕೂ ಸ್ವಾತಂತ್ರ‍್ಯ ಎಂಬುದಕ್ಕೆ ಅರ್ಥ ಬರುವುದು ನಮ್ಮ ಸ್ವಾತಂತ್ರ‍್ಯವನ್ನು ಸಮರ್ಥವಾಗಿ ಉಳಿಸಿಕೊಳ್ಳುವ ಹಾಗೂ ಬೆಳೆಸಿಕೊಳ್ಳುವ ನಡೆಗಳಿಂದ ಮಾತ್ರ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಎನ್.ಚಂದ್ರಶೇಖರ್, ಡಾ.ರವಿಶಂಕರ್ ಎ.ಕೆ., ಡಾ.ಕಿರಣಕುಮಾರ್ ಹೆಚ್.ಜಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿಬಿಎ ವಿದ್ಯಾರ್ಥಿನಿ ಕುಮಾರಿ ಸಂಚಿತ ನಿರೂಪಿಸಿದರು. ಕುಮಾರ ಸಂಜಯ್ ಸ್ವಾಗತಿಸಿದರು. ಕುಮಾರಿ ಐಶ್ವರ್ಯ ವಂದಿಸಿದರು.
ಚಿತ್ರ : ಬೆಂಗಳೂರಿನ ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ವತಿಯಿಂದ ಕನ್ನಡದ ಕಣ್ಣಲ್ಲಿ ಸ್ವಾತಂತ್ರ‍್ಯ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಂಟಹಳ್ಳಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್