ಕೊಲಂಬೊ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (76) ಅವರ ಆರೋಗ್ಯ ಜೈಲಿನಲ್ಲಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರ್ಕಾರಿ ನಿಧಿ ದುರುಪಯೋಗ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕೊಲಂಬೊ ನ್ಯಾಯಾಲಯದಿಂದ ಆಗಸ್ಟ್ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲ್ಪಟ್ಟಿದ್ದ ವಿಕ್ರಮಸಿಂಘೆ, ನಿನ್ನೆ ರಾತ್ರಿ ಅಸ್ವಸ್ಥಗೊಂಡರು. ವೈದ್ಯರ ಸಲಹೆಯ ಮೇರೆಗೆ ಅವರನ್ನು ಐಸಿಯುವಿಗೆ ಸ್ಥಳಾಂತರಿಸಲಾಗಿದೆ.
ನಿರ್ಜಲೀಕರಣ, ಹೆಚ್ಚಿನ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವ ವಿಕ್ರಮಸಿಂಘೆ ಅವರನ್ನು ಆಗಸ್ಟ್ 22ರಂದು ಸಿಐಡಿ ಬಂಧಿಸಿತ್ತು. 2023ರಲ್ಲಿ ಪತ್ನಿಯ ಘಟಿಕೋತ್ಸವಕ್ಕೆ ಇಂಗ್ಲೆಂಡ್‌ಗೆ ತೆರಳುವ ವೇಳೆ ಸರ್ಕಾರಿ ನಿಧಿ ದುರುಪಯೋಗ ಮಾಡಿದ ಆರೋಪ ಅವರ ಮೇಲೆ ಇದೆ.
ಜುಲೈ 2022ರಿಂದ ಸೆಪ್ಟೆಂಬರ್ 2024ರವರೆಗೆ ಶ್ರೀಲಂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ನಾಯಕರಾಗಿ ಖ್ಯಾತರಾಗಿದ್ದರು. ಇದಕ್ಕೂ ಮುನ್ನ ಆರು ಬಾರಿ ಪ್ರಧಾನ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa