ಹೊಸಪೇಟೆ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : 2025-26 ನೇ ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಪರಿಶಿಷ್ಟ ಪಂಗಡದ ಸಮುದಾಯದವರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಹೆಚ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರು ಓನ್, ಕರ್ನಾಟಕ ಓನ್, ಗ್ರಾಮ ಓನ್ ಕೇಂದ್ರಗಳ ಮೂಲಕ ಸೇವಾ ಸಿಂಧು ವೆಬ್‌ಸೈಟ್ https://sevasindhuservices.karnataka.gov.in ಆನ್‌ಲೈನ್ ಮೂಲಕ ಸೆ.17 ರೊಳಗೆ ಅರ್ಜಿ ಸಲ್ಲಿಸಬಹುದು.
ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು: ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ನೇರಸಾಲ ಯೋಜನೆಯಲ್ಲಿ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಘಟಕದ ಸ್ಥಾಪನೆಯ ವೆಚ್ಚ 1 ಲಕ್ಷ ರೂ ಇದ್ದಲ್ಲಿ ಇದರಲ್ಲಿ 50 ಸಾವಿರ ರೂ ಸಹಾಯಧನ ಮತ್ತು 50 ಸಾವಿರ ರೂ ಸಾಲ ನೀಡಲಾಗುವುದು. ಹೈನುಗಾರಿಕೆ ಯೋಜನೆಯಡಿ ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ, ಹಸುಗಳಿಗೆ ಘಟಕದ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ 1.25 ಲಕ್ಷಗಳ ರೂ ಸಹಾಯ ಧನವನ್ನು ಬ್ಯಾಂಕ್‌ಗಳ ಸಹಯೋಗದೊಂದಿಗೆ ನೀಡಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ವಾಹನ ಮತ್ತು ಟ್ಯಾಕ್ಸಿ ಖರೀದಿಗಾಗಿ ಶೇ.75 ರಷ್ಟು ಅಥವಾ ಗರಿಷ್ಠ 4 ಲಕ್ಷ ರೂ ಸಹಾಯಧನವನ್ನು ಬ್ಯಾಂಕ್‌ಗಳ ಸಹಯೋಗದೊಂದಿಗೆ ನೀಡಲಾಗುವುದು. ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ವ್ಯಾಪಾರ ಮತ್ತು ಇತರೆ ಸಣ್ಣ ಉದ್ಯಮಗಳಿಗಾಗಿ ಘಟಕ ಸ್ಥಾಪನೆಯ ವೆಚ್ಚದಲ್ಲಿ ಶೇ.70 ರಷ್ಟು ಅಥವಾ ಗರಿಷ್ಠ 2 ಲಕ್ಷ ರೂ ಸಹಾಯಧನ ಬ್ಯಾಂಕ್‌ಗಳ ಸಹಯೋಗದೊಂದಿಗೆ ನೀಡಲಾಗುತ್ತದೆ.
ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘದ ಕನಿಷ್ಠ 10 ಜನ ಸದಸ್ಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಘಟಕದ ವೆಚ್ಚದಲ್ಲಿ 5 ಲಕ್ಷ ರೂ. ಇದ್ದಲ್ಲಿ ಇದರಲ್ಲಿ 2.50 ಲಕ್ಷರೂ. ಸಹಾಯಧನ ಮತ್ತು 2.50 ಲಕ್ಷರೂ ನಿಗಮದಿಂದ ಸಾಲ ಕಲ್ಪಿಸಲಾಗುವುದು. ಗಂಗಾ ಕಲ್ಯಾಣ ಯೋಜನೆಯಡಿ 1.20 ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಯೋಜನೆಗೆ ಘಟಕ ವೆಚ್ಚ ರೂ. 4.75 ಲಕ್ಷರೂ, ರೂ.3.75 ಲಕ್ಷರೂ (50 ಸಾವಿರ ಸಾಲ ರೂ.ಒಳಗೊಂಡಂತೆ) ನೀಡಲಾಗುತ್ತದೆ. ಭೂ ಒಡೆತನ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 25 ಲಕ್ಷರೂ, 20 ಲಕ್ಷರೂ ವೆಚ್ಚದಲ್ಲಿ. ಶೇ.50 ರಷ್ಟು ಸಹಾಯಧನ ಮತ್ತು ಶೇ.50 ಸಾಲ (ಶೇ.4 ರಷ್ಟು ಬಡ್ಡಿದರ) ದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು.
2023-24 ಮತ್ತು 2024-25ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೊದಲನೇ ಮಹಡಿ, ಕೊಠಡಿ ಸಂಖ್ಯೆ 5, ಹೊಸಪೇಟೆ ತಾಲೂಕು ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್