ಗದಗ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ನಗರದಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರು ಧರ್ಮಸ್ಥಳದ ವಿರುದ್ಧ ಹರಡುತ್ತಿರುವ ಅಪಪ್ರಚಾರದ ಕುರಿತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರುದಾರರೊಂದಿಗೆ ಸಮೀರ್, ಮಟ್ಟಣ್ಣವರ್, ತಿಮರೋಡಿ ಹಾಗೂ ಮಂಪರು ಇವರಿಗೂ ವಿಚಾರಣೆ ನಡೆಯಬೇಕೆಂದು ತಾವು ಒತ್ತಾಯಿಸಿದ್ದೆವು ಎಂದು ಅವರು ಹೇಳಿದರು.
ಕಪೋಲಕಲ್ಪಿತ ಸುದ್ದಿಗಳನ್ನು ಸೃಜಿಸಿ ಜನಮನದಲ್ಲಿ ಕುತೂಹಲ ಹುಟ್ಟಿಸುವ ಉದ್ದೇಶದಿಂದಲೇ ಈ ಅಪಪ್ರಚಾರ ನಡೆದಿದೆ ಎಂದು ಅವರು ಆರೋಪಿಸಿದರು.
ಸೌಜನ್ಯ ಹತ್ಯೆ ಪ್ರಕರಣದ ಸಂದರ್ಭದಲ್ಲಿ ಬಿಜೆಪಿ ಸರ್ಕಾರವೇ ಆರೋಪಿಗಳನ್ನು ಬಂಧಿಸಿತ್ತು ಎಂಬುದನ್ನು ನೆನಪಿಸಿದ ರವಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಈ ರೀತಿಯ ಅಪಪ್ರಚಾರದ ಹಿಂದೆ ಬಲಿಷ್ಠ ಶಕ್ತಿ ಕಾರ್ಯನಿರ್ವಹಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು. “ತಿರುಪತಿ, ಶಬರಿಮಲೆ, ಈಗ ಧರ್ಮಸ್ಥಳ – ಇವೆಲ್ಲ ದೇವಪೀಠಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಮತಾಂತರ ಶಕ್ತಿಗಳು, ಎಡಪಂಥೀಯ ಸಂಘಟನೆಗಳು ಮತ್ತು ಎಸ್‌ಡಿಪಿಐ ಕೈವಾಡ ಇದಿರಬಹುದು” ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ. ರವಿ ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP