ರಾಯಚೂರು, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ದಾನಗಳಲ್ಲಿ ಶ್ರೇಷ್ಠವಾದ ದಾನವೆಂದರೆ ಅದು ರಕ್ತ ದಾನ. ಅಪಘಾತದಂತ ಸಂದರ್ಭದಲ್ಲಿ ಎಷ್ಟೋ ಜನ ಸರಿಯಾದ ಸಮಯಕ್ಕೆ ರಕ್ತ ದೊರೆಯದೆ ಸಾವನ್ನಪ್ಪಿದ್ದಾರೆ. ರಕ್ತದಾನ ಮಾಡುವ ಮೂಲಕ ಇನ್ನೊಬರ ಜೀವಕ್ಕೆ ಮರು ಜೀವ ನೀಡಿದಂತಾಗುತ್ತದೆ. ಇಂತಹ ರಕ್ತದಾನ ಶಿಬಿರ ಹಮ್ಮಿಕೊಂಡ ಪ್ರಜಾಪೀತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.
ರಾಯಚೂರಿನ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಸಹೋದರತ್ವ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಕಷ್ಟದ ಸಂದರ್ಭದಲ್ಲಿರುವ ರೋಗಿಗಳಿಗೆ ನಾವು ಇಂದು ಮಾಡಿರುವ ರಕ್ತದಾನ ಅವರಿಗೆ ಮತ್ತೊಮ್ಮೆ ಜೀವ ತುಂಬಲಿದೆ. ರಕ್ತದಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿಯೂ ಸಹ ರಕ್ತದ ಕೊರತೆ ಇದೆ. ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ತುರ್ತ್ ಸಂದರ್ಭದಲ್ಲಿ ರಕ್ತದಾನಕ್ಕೆ ಮುಂದೆ ಬರಬೇಕು. ರಕ್ತದಾನ ಮಹಾದಾನವಾಗಿದೆ. ರಕ್ತದಾನವೂ ಒಂದು ರೀತಿಯ ಶ್ರೇಷ್ಠ ಸೇವೆಯಾಗಿದೆ. ಪ್ರತಿ ವರ್ಷ ರಕ್ತ ದಾನ ಶಿಬಿರ ಏರ್ಪಡಿಸುತಿರುವ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಜೊತೆಗೆ ನಾವು ಸೇವೆ ಸಲ್ಲಿಸಲು ಸಿದ್ದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ, ಮಹಾ ನಗರ ಪಾಲಿಕೆ ಮಹಾ ಪೌರರಾದ ನರಸಮ್ಮ ನರಸಿಂಹಲು, ಕಾಂಗ್ರೆಸ್ ಹಿರಿ ಮುಖಂಡರಾದ ಜಯಣ್ಣ, ಜಿ. ಶಿವಮೂರ್ತಿ, ರುದ್ರಪ್ಪ ಅಂಗಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ, ಗುರುಸ್ವಾಮಿ ಕಲ್ಲೂರು, ರಾಜಶೇಖರ್ ಮುಸ್ಟೂರು ಸೇರಿದಂತೆ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್