ಗದಗ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ನವಿಲುತೀರ್ಥ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ತನ್ನ ಭೋರ್ಗರೆಯ ಹರಿವಿನಿಂದ ರೈತರ ಸಾವಿರಾರು ಎಕರೆ ಜಮೀನುಗಳನ್ನು ನುಂಗಿಹಾಕಿದೆ. ನರಗುಂದ ತಾಲೂಕಿನ ವಾಸನ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನ್ನದಾತರ ಬದುಕು ಅಕ್ಷರಶಃ ಪ್ರವಾಹದಲ್ಲಿ ತೇಲಿಬಿಟ್ಟಂತಾಗಿದೆ.
ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಬ್ಬು, ಗೋವಿನಜೋಳ ಮುಂತಾದ ಬೆಳೆಗಳನ್ನು ಬೆಳೆಸಿದ್ದರು. ಆದರೆ ಈಗ ಆ ಭರ್ಜರಿ ಬೆಳೆಗಳು ಹೊಳೆಯಂತಾದ ಜಮೀನಿನಲ್ಲಿ ಸಂಪೂರ್ಣ ಮುಳುಗಿವೆ. ಪ್ರವಾಹದ ಅಬ್ಬರದಿಂದ ಬೆಳೆ ಹಾನಿಯಾಗಿದ್ದು, ಇಳುವರಿ ಕುಂಠಿತವಾಗುವ ಭೀತಿ ರೈತರನ್ನು ಕಾಡುತ್ತಿದೆ. “ನಮ್ಮ ವರ್ಷದ ಬದುಕೇ ಹಾಳಾಗಿದೆ” ಎಂದು ರೈತರು ಗೋಳಾಡುತ್ತಿದ್ದಾರೆ. ಪ್ರತಿವರ್ಷ ಇದೇ ಪರಿಸ್ಥಿತಿ ಎದುರಾಗುತ್ತಿದ್ದರೂ ಪರಿಹಾರ ಸಿಗದೆ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲಪ್ರಭಾ ನದಿಯಲ್ಲಿ ಹೂಳು ತುಂಬಿಕೊಂಡಿರುವ ಕಾರಣದಿಂದ ನದಿಯ ಹರಿವಿನ ದಿಕ್ಕು ತಪ್ಪಿ, ರೈತರ ಜಮೀನಿನಲ್ಲಿ ಭೋರ್ಗರೆಯುತ್ತಿದೆ. ನದಿಯ ವಿಸ್ತಾರ ಕಡಿಮೆಯಾದ ಕಾರಣ ಸ್ವಲ್ಪ ಪ್ರಮಾಣದ ನೀರು ಹರಿಸಿದರೂ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗುತ್ತಿದೆ. “ಸರ್ಕಾರ ಹೂಳು ತೆಗೆಸಿದರೆ ಶಾಶ್ವತ ಪರಿಹಾರ ಸಿಗಬಹುದು” ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸಿದ್ದಾರೆ.
ನಿರಂತರ ಮಳೆ ಹಾಗೂ ಪ್ರವಾಹದಿಂದ ಬೆಳೆ ನಾಶವಾದರೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್ ಕೂಡ ರೈತರ ನೋವನ್ನು ಅರಿತುಕೊಳ್ಳಲು ಬಂದಿಲ್ಲವೆಂದು ಆರೋಪಿಸಿದ್ದಾರೆ. ಸರ್ಕಾರವೂ ಪ್ರತಿ ವರ್ಷ ಪರಿಹಾರ ನೀಡುವುದಾಗಿ ಹೇಳಿಕೊಂಡರೂ ನಿಜವಾದ ನೆರವು ಇನ್ನೂ ಸಿಕ್ಕಿಲ್ಲವೆಂದು ರೈತರು ಕಿಡಿಕಾರಿದ್ದಾರೆ.
“ನಾವು ಬದುಕಿಗಾಗಿ ಬೆಳೆ ಬೆಳೆಸಿದ್ರೂ, ಪ್ರವಾಹ ಬಂದು ಹಾಳು ಮಾಡ್ತಾ ಇದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ನಮಗೆ ಸ್ಪಂದಿಸಬೇಕು, ಇಲ್ಲದಿದ್ದರೆ ರೈತರ ಬದುಕೇ ಅಂಧಕಾರವಾಗುತ್ತದೆ” ಎಂದು ಅಳಲು ವ್ಯಕ್ತಪಡಿಸಿದ ರೈತರು, ತಮ್ಮ ಸಂಕಷ್ಟವನ್ನು ತಕ್ಷಣ ಗಮನಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP