ಕೋಲಾರ, ೨೨ ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಲಜೀವನ್ ಮಿಷನ್ ಯೋಜನೆ ಪ್ರತಿ ಮನೆಗೂ ನಳದ ಮೂಲಕ ನೀರು ನೀಡುವ ಮಹತ್ವಾಂಕ್ಷಿ ಯೋಜನೆಯಾಗಿದ್ದು, ಗುಣಮಟ್ಟ ಕಾಯ್ದುಕೊಳ್ಳಿ, ಲೋಪಗಳಿಗೆ ಅವಕಾಶ ನೀಡದಿರಿ ಎಂದು ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸೂಚನೆ ನೀಡಿದರು.
ಕೋಲಾರ ತಾಲೂಕಿನ ಚಲ್ಲಹಳ್ಳಿ ಗ್ರಾಮದಲ್ಲಿ ಸೂಲೂರು ಗ್ರಾಮ ಪಂಚಾಯಿತಿ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅತಿ ಪ್ರಮುಖ ಕಾರ್ಯಕ್ರಮವಾದ ಜಲಜೀವನ್ ಮಿಷನ್ನ ೬೭ ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರ ಪ್ರತಿ ಮನೆಗೂ ನಳದ ಮೂಲಕ ನೀರು ಒದಗಿಸುವ ಪ್ರಯತ್ನವಾಗಿ ರಾಷ್ಟ್ರವ್ಯಾಪಿ ಈ ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು, ಪ್ರತಿ ಮನೆಗೂ ನೀರಿನ ಸಂಪರ್ಕ ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಹೆಚ್ಚಿನ ಅನುದಾನ ನೀಡಿದ್ದು ಅವರಿಗೆ ಗ್ರಾಮ ಪಂಚಾಯಿತಿ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳಿದ ಗ್ರಾಮಗಳಲ್ಲೂ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಶಾಸಕರು ಒಪ್ಪಿಗೆ ನೀಡಿದ್ದು, ತಮ್ಮ ಪಂಚಾಯಿತಿಗೆ ಅತಿ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಗ್ಯಾರೆಂಟಿಗಳಿಗೆ ಹಣ ಹೊಂದಿಸಲಾಗದೇ ಅಭಿವೃದ್ದಿ ಕಾಮಗಾರಿಗಳಿಗೆ ಸರ್ಕಾರದಲ್ಲಿ ಹಣದ ಕೊರತೆ ಇದೆ ಎಂಬುದು ಸುಳ್ಳು ಎಂದ ಅವರು, ಇದಕ್ಕೆ ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳೇ ಸಾಕ್ಷಿ ಎಂದು ತಿಳಿಸಿದರು.
ಒಟ್ಟಾರೆ ಶಾಸಕರು,ವಿಧಾನ ಪರಿಷತ್ ಸದಸ್ಯರು, ನಸೀರ್ ಅಹಮದ್ ಮೂವರ ತಂಡ ಕೋಲಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನ, ಶಾಸಕರ ನಿಧಿ, ವಿಧಾನಪರಿಷತ್ ಸದಸ್ಯರ ನಿಧಿ, ನಸೀರ್ ಅಹಮದ್ ಅವರ ನೆರವು ಪಡೆದು ಹೆಚ್ಚಿನ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಮತ್ತಷ್ಟು ನೆರವು ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟದಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು ಎಂದ ಅವರು, ಈ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಸಹಾ ಕಾಮಗಾರಿಯ ಗುಣಮಟ್ಟ ಗಮನಿಸುತ್ತಿರಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಲ್ಲಹಳ್ಳಿ ಆದಿಮೂರ್ತಿ, ನುಗಲಾಪುರ ಕೃಷ್ಣಮೂರ್ತಿ, ಸೂಲೂರು ಅಶೋಕ್, ಮುನಿರಾಡ್ಡಿ, ತಲಗುಂದ ವೆಂಕಟೇಶಪ್ಪ, ನರಸರಾಜು, ಸುಜಾತಮ್ಮ, ನಾಗಲಾಪುರ ವಿಜಯ್, ಗ್ರಾಮಪಂಚಾಯತ್ನ ಪ್ರದೀಪ್. ಚಲ್ಲಹಳ್ಳಿ ಡೈರಿ ಅಧ್ಯಕ್ಷ ಅಶೋಕ್ ಹಾಗೂ ಚಲ್ಲಹಳ್ಳಿ ಗ್ರಾಮಸ್ತರು ಹಾಗೂ ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲೂಕಿನ ಚಲ್ಲಹಳ್ಳಿ ಗ್ರಾಮದಲ್ಲಿ ಸೂಲೂರು ಗ್ರಾಮ ಪಂಚಾಯಿತಿ ವತಿಯಿಂದ ಜಲಜೀವನ್ ಮಿಷನ್ನ ೬೭ ಲಕ್ಷ ರೂ ವೆಚ್ಚದ ಕಾಮಗಾರಿಗೆ ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಚಾಲನೆ ನೀಡಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್