ಕೊಪ್ಪಳ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆಗಸ್ಟ್ 27 ಮತ್ತು ಸೆಪ್ಟೆಂಬರ್ 5 ರಂದು ನಡೆಯಲಿರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಮ್ಮ ದೇಶವು ಶಾಂತಿಗೆ ಹೆಸರಾಗಿದೆ. ನಾವೆಲ್ಲರೂ ವಿವಿಧ ಜಾತಿ ಧರ್ಮದವರಾಗಿದ್ದರು ಪರಸ್ಪರ ಸಹೋದರರಂತೆ ಇಲ್ಲಿ ಬಾಳುತ್ತಿದ್ದೇವೆ. ಹೀಗಾಗಿ ಗೌರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್, ಈ ಎರಡು ಹಬ್ಬಗಳನ್ನು ಎಲ್ಲರೂ ಸೇರಿ ಶಾಂತಿ ಸೌಹಾರ್ದತೆಯಿಂದ ಜಿಲ್ಲೆಯಲ್ಲಿ ಆಚರಿಸಬೇಕು ಎಂದರು.
ಪಿಓಪಿ ಗಣೇಶ ಮೂರ್ತಿಗಳು ನಿಷೇಧವಾಗಿ ಬಹಳಷ್ಟು ವರ್ಷಗಳಾಗಿದ್ದು, ಆದಾಗ್ಯೂ ಕೂಡ ಕೆಲವು ಕಡೆ ಪಿಓಪಿ ಗಣೇಶ ವಿಗ್ರಹಗಳ ಪ್ರತಿಷ್ಟಾಪನೆ ಮಾಡುವುದು ಕಂಡುಬರುತ್ತದೆ. ಈ ವರ್ಷ ಎಲ್ಲರೂ ಕಡ್ಡಾಯವಾಗಿ ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಗಣೇಶ ಚತುರ್ಥಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು.
ಪಿಓಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಕಂಡುಬಂದರೆ, ಅವುಗಳನ್ನು ಪಶಪಿಡಿಸಿಕೊಳ್ಳುವಂತೆ ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 800 ಕ್ಕಿಂತಲು ಹೆಚ್ಚಿನ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ರಸ್ತೆಗಳ ದುರಸ್ಥಿಗೂ ಸಹ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪೆಂಡಾಲ್ ಹಾಕುವುದನ್ನು ಮಾಡಬಾರದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರ ಓಡಾಟಕ್ಕೆ ಮತ್ತು ಅಂಬ್ಯುಲೆನ್ಸ್, ಅಗ್ನಿ ಶಾಮಕ ವಾಹನಗಳ ಓಡಾಟಕ್ಕೆ ತೊಂದರೆ ಮಾಡಲು ಸಹ ಅವಕಾಶವಿರುವುದಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಿಸಿದ್ದಿ ಅವರು ಮಾತನಾಡಿ, ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಪ್ರಯುಕ್ತ ಈಗಾಗಲೇ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಗಳನ್ನು ಕೈಗೊಳ್ಳಲಾಗಿದ್ದು, ಅವಶ್ಯವಿದ್ದಲ್ಲಿ ಇನ್ನೂ ಸಭೆಗಳನ್ನು ಕೈಗೊಳ್ಳಲಾಗುವುದು. ಕಳೆದ ಬಾರಿಯೂ ಈ ಎರಡು ಹಬ್ಬಗಳನ್ನು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಾದಂತೆ ಶಾಂತಿಯುತವಾಗಿ ಆಚರಣೆ ಮಾಡಲಾಗಿದೆ. ಅದೇ ರೀತಿ ಈ ವರ್ಷವು ಈ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ಆಚರಿಸಬೇಕು ಎಂದು ಹೇಳಿದರು.
ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಎಲ್ಲಾ ರಿತಿಯ ಪರವಾನಿಗೆಗಳನ್ನು ಪಡೆಯಬೇಕು. ಗಣೇಶ ಪ್ರತಿಷ್ಠಾಪನೆ ಪೆಂಡಾಲ್‌ಗಳಲ್ಲಿ ಅಗ್ನಿನಂದಕಗಳನ್ನು ಬಳಕೆ ಮಾಡಬೇಕು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಮಾರ್ಗ ನಿರ್ಮಿಸಬೇಕು. ಗಣೇಶ ಪ್ರತಿಷ್ಠಾಪಣಾ ಮಂಡಳಿಯವರು ಮೂರ್ತಿಗಳ ವಿಸರ್ಜನೆ, ಮೆರವಣಿಗೆ ಮಾಡುವ ಮಾರ್ಗಗಳ ಮಹಿತಿಯನ್ನು ಮುಂಚಿತವಾಗಿ ಸಂಬಂಧಪಟ್ಟ ಆಯಾ ಪೊಲೀಸ್ ಠಾಣೆಗೆ ತಿಳಿಸಿ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಪರವಾನಿಗೆ ಪಡೆದ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವಂತಿಲ್ಲ ಎಂದರು.
ವಿವಿಧ ಸಮಾಜದ ಮುಖಂಡರಾದ ಸೈಯದ್ ನಾಸೀರ ಹುಸೇನಿ, ಸಿದ್ದಪ್ಪ ಹಂಚಿನಾಳ, ವಸಂತಕುಮಾರ ಬಾವಿಮನಿ, ಶಾಮಿದ್ ಮನಿಯಾರ್, ಕರಿಬಸಪ್ಪ ಬಿನ್ನಾಳ, ಹನುಮಂತಪ್ಪ ಹ್ಯಾಟಿ ಹಾಗೂ ಮತ್ತಿತರರು ಗಣೇಶ ಮತ್ತು ಮತ್ತು ಈದ್ ಮಿಲಾದ್, ಈ ಎರಡೂ ಹಬ್ಬಗಳ ಆಚರಣೆ ಕುರಿತು ತಮ್ಮ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಸೇರಿದಂತೆ ತಹಶಿಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪರಿಸರ, ಅರಣ್ಯ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್