ಬಳ್ಳಾರಿ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಿಕ್ಕಾಗಿ ಸಂಸದ ಈ. ತುಕಾರಾಂ ಅವರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮತ್ತು ತೆರಿಗೆ ಸಮಿತಿ ಅಧ್ಯಕ್ಷ ಸಿಎ ಕೆ. ರಾಜಶೇಖರ್ ಅವರು ಕೇಂದ್ರ ಸರ್ಕಾರದ ಸಚಿವರನ್ನು - ಹಿರಿಯ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ, ಮನವಿ ಸಲ್ಲಿಸಿ ಈ ಕುರಿತು ಚರ್ಚೆ ನಡೆಸಿದ್ದಾರೆ.
ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ, ಬಾಂಬೆ ಮತ್ತು ಕೊಲ್ಹಾಪುರ ರೈಲು ಮಾರ್ಗವನ್ನು ಬಳ್ಳಾರಿಯವರೆಗೆ ವಿಸ್ತರಣೆ ಮಾಡುವ, ನಾಗರಿಕ ವಿಮಾನಯಾನ ಸಚಿವ ರಾಂಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಪರಿಸರ ನಿಯಂತ್ರಣ ಮಂಡಲಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕುಡತಿನಿ ಕೈಗಾರಿಕಾ ಪ್ರದೇಶಕ್ಕೆ ಪರಿಸರ ಇಲಾಖೆಯ ಅನುಮತಿ ನೀಡುವ ಕುರಿತು ಲಿಖಿತ ಮನವಿಯನ್ನು ಸಲ್ಲಿಸುವ ಮೂಲಕ ತ್ವರಿತವಾಗಿ ಕ್ರಮಕೈಗೊಳ್ಳಲು ಚರ್ಚೆ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಬಳ್ಳಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ, ವ್ಯಾಪಾರ - ವಾಣಿಜ್ಯ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಚಿವರು - ಅಧಿಕಾರಿಗಳನ್ನು ಭೇಟಿ ಮಾಡಿ, ಚರ್ಚೆ ನಡೆಸಿ, ತ್ವರಿತವಾಗಿ ಕ್ರಮಕೈಗೊಳ್ಳಲು ಮನವಿ ಮಾಡಲಾಗಿದೆ. ಅಲ್ಲದೇ, ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿ, ಜನಪ್ರಿಯರಾಗಿದ್ದ ಐಎಎಸ್ ಅಧಿಕಾರಿಗಳಾದ ಎಸ್.ಎಸ್. ನಕುಲ್ ಮತ್ತು ಅರವಿಂದ ಶ್ರೀವಾಸ್ತವ ಅವರನ್ನೂ ಭೇಟಿ ಮಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಗಿದೆ. ಸಚಿವರು ಮತ್ತು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರದಲ್ಲೇ ನಮ್ಮ ಜನಪರವಾಗಿರುವ ಬೇಡಿಕೆಗಳು ಈಡೇರಿಸಲ್ಪಡುವ ವಿಶ್ವಾಸ ನಮಗಿದೆ ಎಂದು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್