ಗದಗ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಿಂದ ಹರದಗಟ್ಟಿ ಗ್ರಾಮದತ್ತ ಸಾಗುವ ಪ್ರಮುಖ ಸಂಪರ್ಕ ಮಾರ್ಗದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಗುಡಿ ರಂಗಾಚಾರಿ ಆಶ್ರಯ ಬಡಾವಣೆಯ ಮುಂಭಾಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು, ಸಂಚಾರವೇ ಸವಾರರಿಗೆ ಸವಾಲಾಗಿದೆ. ಅಡ್ಡಾದಿಡ್ಡಿ ಬಿದ್ದಿರುವ ಗುಂಡಿಗಳಿಂದಾಗಿ ರಸ್ತೆ ಎನ್ನುವುದಕ್ಕಿಂತ ‘ಗುಂಡಿಗಳ ಸಾಮ್ರಾಜ್ಯ’ವೆಂಬಂತಾಗಿದೆ.
ಈ ಮಾರ್ಗವು ಲಕ್ಷ್ಮೇಶ್ವರವನ್ನು ಹರದಗಟ್ಟಿ, ಅಮರಾಪುರ, ಹುಲ್ಲೂರು, ಬೆಳ್ಳಟ್ಟಿ ಹಾಗೂ ಶಿರಹಟ್ಟಿ ಕಡೆಗೆ ಸಂಪರ್ಕಿಸುವ ಪ್ರಮುಖ ರಸ್ತೆ. ದಿನನಿತ್ಯ ಸಾವಿರಾರು ವಾಹನಗಳು, ಅದರಲ್ಲೂ ವಿದ್ಯಾರ್ಥಿಗಳನ್ನು ಹೊತ್ತೊಯ್ಯುವ ಬಸ್‌ಗಳು, ಸರಕು ಸಾಗಣೆ ವಾಹನಗಳು ಹಾಗೂ ದ್ವಿಚಕ್ರ ವಾಹನಗಳು ಈ ಮಾರ್ಗವನ್ನು ಬಳಸುತ್ತಿವೆ. ಗುಂಡಿಗಳಿಂದ ವಾಹನ ಚಾಲಕರು ಪ್ರತಿಕ್ಷಣವೂ ಜಾಗರೂಕರಾಗಿರಬೇಕಾದ ಸ್ಥಿತಿ ಉಂಟಾಗಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ.
ಮಳೆಗಾಲದಲ್ಲಿ ಗುಂಡಿಗಳು ನೀರಿನಿಂದ ತುಂಬಿ, ಅದರ ಆಳ ಕಾಣದಿರುವ ಕಾರಣ ಅಪಾಯ ಇನ್ನಷ್ಟು ಹೆಚ್ಚುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿ, ಕೆಲವರು ಗಾಯಗೊಂಡಿದ್ದಾರೆ. ತುರ್ತು ಚಿಕಿತ್ಸೆಗಾಗಿ ಅವರನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಡಿ ರಂಗಾಚಾರಿ ಆಶ್ರಯ ಬಡಾವಣೆಯ ನಿವಾಸಿಗಳು ಹಾಗೂ ರಸ್ತೆ ಬಳಕೆದಾರರು, ಈ ರಸ್ತೆ ಹಲವು ವರ್ಷಗಳಿಂದ ಸರಿಯಾಗಿ ದುರಸ್ತಿ ಆಗಿಲ್ಲ. ಪ್ರತೀ ಬಾರಿ ಚುನಾವಣೆ ಸಮಯದಲ್ಲಿ ಸುಧಾರಣೆ ಮಾಡುವ ಭರವಸೆ ನೀಡಲಾಗುತ್ತದೆ. ಆದರೆ ಕೆಲಸ ಕೈಗೆತ್ತಿಕೊಳ್ಳುವುದಿಲ್ಲ. ಇದೀಗ ಪರಿಸ್ಥಿತಿ ಸಹನೀಯದ ಹಂತ ಮೀರಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಶಾಸಕರನ್ನು ಉದ್ದೇಶಿಸಿ, ರಸ್ತೆಯ ಇಂದಿನ ಸ್ಥಿತಿಯನ್ನು ಸ್ವತಃ ಬಂದು ನೋಡಿ. ಆದಷ್ಟು ಬೇಗನೆ ಶಾಶ್ವತ ದುರಸ್ತಿ ಮಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಈ ರಸ್ತೆ ಸರಿಪಡಿಸಲು ಸರಕಾರವು ಅಗತ್ಯ ಬಜೆಟ್ ಮೀಸಲಿಟ್ಟು, ಗುಣಮಟ್ಟದ ಕಾಮಗಾರಿ ನಡೆಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇಲ್ಲವಾದರೆ, ಜನರ ಸುರಕ್ಷತೆ ಹಾಗೂ ಜೀವ ಭದ್ರತೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / lalita MP