ಬೆಂಗಳೂರು, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಬೆನ್ನಲ್ಲೇ ಬಿಜೆಪಿ–ಕಾಂಗ್ರೆಸ್ ನಾಯಕರ ನಡುವೆ ಪ್ರತಿಷ್ಠೆ ಮಾತಿನ ಸಮರ ಭುಗಿಲೆದ್ದಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಪಾಲು ಹೆಚ್ಚು ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದರೆ, ರಾಜ್ಯ ಸರ್ಕಾರವೇ ಹೆಚ್ಚಿನ ಹಣ ಖರ್ಚು ಮಾಡಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಸಮ್ಮುಖದಲ್ಲಿ ಲೆಕ್ಕ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ಮೆಟ್ರೋ ಹಂತ–3 ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ರಾಜ್ಯ ಸರ್ಕಾರದ ಕೊಡುಗೆ ಹೆಚ್ಚಿನದು ಎಂಬ ಲೆಕ್ಕವನ್ನು ಬಿಚ್ಚಿಟ್ಟರು.
ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಯೋಜನೆಯಾದರು, 96.10 ಕಿ.ಮೀ ಉದ್ದದ ಕಾಮಗಾರಿ ಪೈಕಿ ರಾಜ್ಯ ಸರ್ಕಾರವೇ ₹23 ಸಾವಿರ ಕೋಟಿ ವೆಚ್ಚ ಮಾಡಿದ್ದು, ಕೇಂದ್ರ ಸರ್ಕಾರ ಕೇವಲ ₹7,467.86 ಕೋಟಿ ರೂ. ಮಾತ್ರ ನೀಡಿದೆ ಎಂದು ಹೇಳಿದರು.
ಮೆಟ್ರೋ ಮೂಲಕ ಪ್ರತಿ ದಿನ 9 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಹಳದಿ ಮಾರ್ಗ ಸೇರ್ಪಡೆಯಿಂದ ಅದು 12.5 ಲಕ್ಷಕ್ಕೆ ಏರಲಿದೆ. 2030ರೊಳಗೆ 220 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಿ, ದಿನಕ್ಕೆ 30 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ಎರಡನೇ ನಗರ ಬೆಂಗಳೂರು ಆದರೂ ಕೇಂದ್ರದ ಅನುದಾನದಲ್ಲಿ ನಾವು ಹಿಂದುಳಿದಿದ್ದೇವೆ, ಮಹಾರಾಷ್ಟ್ರ–ಗುಜರಾತ್‌ಗೆ ನೀಡುವಂತೆಯೇ ಕರ್ನಾಟಕಕ್ಕೂ ಅಭಿವೃದ್ಧಿಯಲ್ಲಿ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa