ಬಳ್ಳಾರಿ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆಗಸ್ಟ್ 25 ಅಥವಾ 26 ರಂದು ಕುಡತಿನಿ, ಸಿದ್ದಮ್ಮನಹಳ್ಳಿ, ವೇಣಿವೀರಾಪುರ, ಹರಗಿನಡೋಣಿ ಸೇರಿ ಸುತ್ತಲಿನ ಗ್ರಾಮಗಳ ಭೂ ಸಂತ್ರಸ್ತರ ಜೊತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಜಂಟಿ ಸಭೆಯನ್ನು ನಡೆಸಲಾಗುತ್ತದೆ ಎಂದು ಸಂಸದ ಇ. ತುಕಾರಾಂ ಅವರು ತಿಳಿಸಿದ್ದಾರೆ.
ಕುಡತಿನಿ ಗ್ರಾಮದಲ್ಲಿ 966 ದಿನಗಳ ಹೋರಾಟ ಮಾಡುತ್ತಿರುವ ಭೂ ಸಂತ್ರಸ್ತ ರೈತರು ಮತ್ತು ವಿವಿಧ ಸಂಘಟನೆಗಳನ್ನು ಕುಡತಿನಿಯ ಹೋರಾಟದ ಸ್ಥಳದಲ್ಲಿ, ಮಾತನಾಡಿದ ಸಂಸದ ಇ. ತುಕಾರಾಂ ಅವರು, ಕೆಐಡಿಬಿಯು 12 ಸಾವಿರ ಎಕರೆಗೂ ಹೆಚ್ಚಿನ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬೃಹತ್ ಕೈಗಾರಿಕೆಗಳಿಗೆ ನೀಡಿದೆ. ಕೆಐಡಿಬಿಯು ನೀಡಿರುವ ಪರಿಹಾರವು ತೀರ ಕಡಿಮೆಯಾಗಿದೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು 966 ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಆಗಸ್ಟ್ 25 ಅಥವಾ 26 ರಂದು ಮುಖ್ಯಮಂತ್ರಿಗಳ ಜೊತೆಯಲ್ಲಿ ಬೆಂಗಳೂರಿನಲ್ಲಿ ಜಂಟಿ ಸಭೆಯನ್ನು ನಡೆಸಲಾಗುತ್ತದೆ. ಪ್ರತಿಭಟನಾ ನಿರತರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.
ಭೂ ಸಂತಸ್ತ್ರ ಹೋರಾಟಸಮಿತಿ ಕುಡತಿನಿ, ಕರ್ನಾಟಕ ಪ್ರಾಂತ ರೈತ ಸಂಘಟನೆ, ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್, ಕನ್ನಡ ಪರ ಸಂಘಟನೆಗಳು ಜಂಟಿ ಸಮಿತಿ ನೇತೃತ್ವದಲ್ಲಿ ಭೂ ಸಂತ್ರಸ್ತ ರೈತರು 966 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚಿನ ಪರಿಹಾರದ ತೀರ್ಪನ್ನು ಜಾರಿ ಮಾಡಲು ಆಗ್ರಹಿಸಿದ್ದರು. ಆದರೆ, ಸರ್ಕಾರ ರೈತರ ಬೇಡಿಕೆಯನ್ನು ಈಡೇರಿಸಲು ನಿರ್ಲಕ್ಷ್ಯಧೋರಣೆ ತಾಳಿತ್ತು. ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಕುಡತಿನಿಯಿಂದ ಸಂಡೂರು ಪಟ್ಟಣದಲ್ಲಿ ಇರುವ ಸಂಸದರ ಮನೆಯ ಆಗಸ್ಟ್ 7 ರಿಂದ 8 ವರೆಗೆ ಪಾದಯಾತ್ರೆ ನಡೆಸಿ, ಮನವಿ ಸಲ್ಲಿಸಲು ನಿರ್ಧರಿಸಿದ್ದರು.
ಆದರೆ, ರೈತರು ಪಾದಯಾತ್ರೆ ಬರುವುದು ಬೇಡ. ನಾನೇ ಆಗಸ್ಟ್ 9 ರಂಬು ಪ್ರತಿಭಟನಾ ಸ್ಥಳಕ್ಕೆ ಬರುವೆ ಎಂದು ಸಂಸದರು ಹೇಳಿದ್ದ ಕಾರಣ, ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಮತ್ತು ವಿವಿಧ ಸಂಘಟನೆಗಳವರು ಪಾದಯಾತ್ರೆಯನ್ನು ಕೈಬಿಟ್ಟಿದ್ದರು. ಸಂಸದ ಇ. ತುಕಾರಾಂ ಅವರು `ಕೊಟ್ಟ ಮಾತಿನಂತೆ' ಕುಡತಿನಿಗೆ ಶನಿವಾರ ಬಂದು, ಜಂಟಿ ಸಭೆಯ ವಿಷಯವನ್ನು ಮನವರಿಕೆ ಮಾಡಿಕೊಟ್ಟು, ರೈತ ಮುಖಂಡರು ಮತ್ತು ಆಸಕ್ತರು ಬೆಂಗಳೂರಿಗೆ ಬರಲು ಆಹ್ವಾನ ನೀಡಿದರು.
ಮುಖಂಡರಾದ ಯು. ಬಸವರಾಜ, ಜೆ. ಸತ್ಯಬಾಬು, ವಿ.ಎಸ್. ಶಿವಶಂಕರ, ಜಂಗ್ಲಿ ಸಾಬ್, ಎಂ. ತಿಪ್ಪೇಸ್ವಾಮಿ ಹಾಗೂ ಏಳು ಹಳ್ಳಿಗಳ ಭೂ ಸಂತ್ರಸ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್