ಗದಗ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆ ಬಡ ಕುಟುಂಬಗಳ ಮೇಲೆ ಕಹಿ ಅನುಭವ ಬೀರಿದೆ. ಪಟ್ಟಣದ ಪುರಸಭೆ 12ನೇ ವಾರ್ಡಿನ ಮಾದೇವಪ್ಪ ಗೊಜನೂರು ಹಾಗೂ ಗುರುನಾಥ ಸೂರಟೂರ ಎಂಬವರ ಜಂತಿ ಮನೆಗಳ ಮೇಲ್ಚಾವಣಿ ಮಳೆ ನೀರಿನ ತೇವಕ್ಕೆ ತಾಳದೆ ಕುಸಿದು ಬಿದ್ದಿದೆ. ಗೋಡೆ ಮತ್ತು ಚಾವಣಿಯ ತುಂಡುಗಳು ಬಿದ್ದರೂ, ಮನೆಯಲ್ಲಿದ್ದವರು ಅದೃಷ್ಟವಶಾತ್ ಸುರಕ್ಷಿತರಾಗಿದ್ದಾರೆ.
ಮನೆ ಕುಸಿತದ ಸುದ್ದಿ ತಿಳಿಯುತ್ತಿದ್ದಂತೆ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಕೊಂಚಿಗೇರಿ ಮಠ ತಕ್ಷಣ ಸ್ಥಳಕ್ಕೆ ತೆರಳಿ ಹಾನಿ ಪರಿಶೀಲಿಸಿದರು. ಅವರು ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ತುರ್ತು ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮ ಲೆಕ್ಕಾಧಿಕಾರಿ, ಮನೆಯ ಸಂಪೂರ್ಣ ಹಾನಿಯ ವಿವರಗಳನ್ನು ದಾಖಲಿಸಿ, ಸರ್ಕಾರದಿಂದ ಲಭ್ಯವಿರುವ ಪರಿಹಾರ ಧನವನ್ನು ಶೀಘ್ರದಲ್ಲಿ ಒದಗಿಸಲಾಗುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಮಳೆಯಿಂದ ಪಟ್ಟಣದ ಇನ್ನೂ ಹಲವೆಡೆ ಹಳೆಯ ಮನೆಗಳು ಭಾಗಶಃ ಹಾನಿಗೊಳಗಾಗುತ್ತಿರುವ ಮಾಹಿತಿ ಕೂಡ ಸ್ಥಳೀಯರಿಂದ ಲಭ್ಯವಾಗಿದೆ.
ಸದಸ್ಯ ಪ್ರಕಾಶ್ ಕೊಂಚಿಗೇರಿ ಮಠ ಅವರ ತ್ವರಿತ ಸ್ಪಂದನೆ ಹಾಗೂ ಹಾನಿಗೊಳಗಾದ ಕುಟುಂಬಗಳೊಂದಿಗೆ ತಾವು ತೋರೆದ ಸಾಂತ್ವನದ ನಡೆಗೆ ವಾರ್ಡಿನ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು, ನಿರಂತರ ಮಳೆಯಿಂದ ಹಳೆಯ ಮನೆಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP