ಬಳ್ಳಾರಿ, 08 ಜುಲೈ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‍ಐ) ಯೋಜನೆಗೆ ಅನುಮೋದನೆ ನೀಡಿದ್ದು, ಉದ್ಯೋಗ ಸೃಷ್ಠಿ ಮತ್ತು ಎಲ್ಲಾ ಉತ್ಪಾದನಾ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‍ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವಿ.ಪ್ರವೀಣ್ ಅವರು ತಿಳಿಸಿದ್ದಾರೆ.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‍ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‍ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ಕೊಪ್ಪಳ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕಾ ವಲಯ ಮತ್ತು ಇತರೆ ವಲಯಗಳ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗಿಗಳಿಗೆ ಕೆಲಸ ನೀಡಿದ ಉದ್ಯೋಗದಾತರು ಇಬ್ಬರಿಗೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಈ ಯೋಜನೆಯನ್ನು 2024–25ರ ಕೇಂದ್ರ ಬಜೆಟ್‍ನಲ್ಲಿ ಪರಿಚಯಿಸಲಾಯಿತು. ಯುವಕರಿಗೆ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಸಲುವಾಗಿ ಜಾರಿಗೊಳಿಸಲಾಯಿತು. ಈ ಯೋಜನೆಯ ಪ್ರಯೋಜನವು 2025 ರ ಆಗಸ್ಟ್ 01 ರಿಂದ 2027 ರ ಜುಲೈ 31 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.
ಇಪಿಎಫ್‍ಓ ಕಚೇರಿ ವತಿಯಿಂದ ಈಗಾಗಲೇ ಪ್ರತಿ ತಿಂಗಳು ಆಯೋಜಿಸುತ್ತಿರುವ ‘ನಿಧಿ ಆಪ್ಕೆ ನಿಕಟ್’ನಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಲಾಗುವುದು ಹಾಗೂ ತಾಲ್ಲೂಕು ಮಟ್ಟದಲ್ಲಿ ಜಾಗೃತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‍ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯ ಆರ್ಥಿಕ ನಿರ್ವಹಣಾಧಿಕಾರಿ ಕೆ.ಎಸ್.ವೇಣುಗೋಪಾಲ್ ಅವರು, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ 2 ಕಂತುಗಳಲ್ಲಿ ರೂ.15,000 ವರೆಗಿನ 1 ತಿಂಗಳ ವೇತನ ನೀಡಲಾಗುವುದು. ಹೊಸ ಉದ್ಯೋಗಿಯ ಸೇರ್ಪಡೆಗಾಗಿ ಉದ್ಯೋಗದಾತರಿಗೆ 2 ವಷರ್Àಗಳವರೆಗೆ ತಿಂಗಳಿಗೆ ಗರಿಷ್ಟ 3,000 ರೂ.ಗಳ ಪೆÇ್ರೀತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದ್ದು, ʻಭಾಗ-ಎʼ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ʻಭಾಗ-ಬಿʼ ಉದ್ಯೋಗದಾತರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದರು.
*ಭಾಗ ಎ: ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹಧನ*
ಈ ಭಾಗವು ʻಇಪಿಎಫ್‍ಒ’ ನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಯೋಜನೆಯ ಸಾಮಾಜಿಕ ಭದ್ರತೆಯ ಮೂಲಕ ಸುರಕ್ಷತಾ ಜಾಲವನ್ನು ಒದಗಿಸುತ್ತದೆ ಮತ್ತು ಔಪಚಾರಿಕ ಆರ್ಥಿಕತೆಗೆ ಸಂಯೋಜಿಸಲು ಅವರಿಗೆ ಸಹಾಯ ಮಾಡುತ್ತದೆ. 1 ಲಕ್ಷ ರೂ.ವರೆಗೆ ಮಾಸಿಕ ವೇತನ ಪಡೆಯುವ ಉದ್ಯೋಗಿಗಳು ಅರ್ಹರಾಗಿರುತ್ತಾರೆ.
ಪ್ರತಿಯೊಬ್ಬ ಅರ್ಹ ಉದ್ಯೋಗಿಗೆ ಒಂದು ತಿಂಗಳ ಇಪಿಎಫ್ ವೇತನ (ರೂ. 15,000 ವರೆಗೆ) ಎರಡು ಕಂತುಗಳಲ್ಲಿ ಲಭಿಸಲಿದೆ. ಆರು ತಿಂಗಳ ನಿರಂತರ ಸೇವೆಯ ನಂತರ ಮೊದಲ ಕಂತನ್ನು ವಿತರಿಸಲಾಗುತ್ತದೆ. 12 ತಿಂಗಳ ನಂತರ ಮತ್ತು ಕಡ್ಡಾಯ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಂಡ ನಂತರ ಎರಡನೇ ಕಂತನ್ನು ಬಿಡುಗಡೆ ಮಾಡಲಾಗುತ್ತದೆ. ದೀರ್ಘಕಾಲೀನ ಹಣಕಾಸು ಯೋಜನೆಯನ್ನು ಉತ್ತೇಜಿಸಲು ಪ್ರೋತ್ಸಾಹಧನ ಒಂದು ಭಾಗವನ್ನು ಉಳಿತಾಯ ಸಾಧನ ಅಥವಾ ಠೇವಣಿ ಖಾತೆಯಲ್ಲಿ ಇಡಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಯ ಸಹಾಯಕ ಆಯುಕ್ತ ಟಿ.ನಂದನ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್