ರಾಯಚೂರು, 06 ಜುಲೈ (ಹಿ.ಸ.) :
ಆ್ಯಂಕರ್ : ನಿರಂತರ ಕಾರ್ಯದಲ್ಲಿ ತೊಡಗುವ ಮತ್ತು ಸಾಮಾನ್ಯರೊಳಗೆ ಸಾಮಾನ್ಯನಾಗಿ ಕೆಲಸಮಾಡುವ ಸ್ವಭಾವ ನನ್ನದಾಗಿದ್ದು, ವಿಶ್ವವಿದ್ಯಾನಿಲಯವನ್ನು ಕಾಳಜಿ, ಶಿಸ್ತುಬದ್ಧವಾಗಿ, ಶೈಕ್ಷಣಿಕ ಪ್ರಗತಿಯ ಜೊತೆಗೆ ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇನೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾದ ಡಾ.ಶಿವಾನಂದ ಕೆಳಗಿನಮನಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನ ಕುಲಪತಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿ ಹೊಸ ಮನಸುಗಳಿವೆ, ಕನಸುಗಳನ್ನು ಕಟ್ಟಿಕೊಂಡವರಿದ್ದಾರೆ, ಉತ್ತಮ ಆಲೋಚನೆಗಳನ್ನು ಮಾಡುವವರಿದ್ದಾರೆ ಅವರೊಂದಿಗೆ ನಾನು ಕೈ ಜೋಡಿಸಬಲ್ಲೆ ಎಂಬ ಭರವಸೆಯೊಂದಿಗೆ ನಿಮ್ಮೋಟ್ಟಿಗೆ ನಿಲ್ಲಲು ಬಂದಿದ್ದೇನೆ. ನಾವೆಲ್ಲರೂ ಒಂದೇ ಕುಟುಂಬದವರಾಗಿ ಈ ವಿಶ್ವವಿದ್ಯಾನಿಲಯವನ್ನು ಕಟ್ಟೋಣ, ಮಹರ್ಷಿ ವಾಲ್ಮೀಕಿಯವರ ಹೆಸರು ಚಿರಸ್ಥಾಯಿಯವಾಗಿ ಉಳಿಯಬೇಕು ಆ ನಿಟ್ಟಿನಲ್ಲಿ ನಮ್ಮ ಕೆಲಸ ಕಾರ್ಯಗಳು ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ. ಗುಂಪುಗಾರಿಕೆ, ರಾಜಕಾರಣ ಮತ್ತು ಜಾತೀಯತೆ ಮಾಡುವವರನ್ನು ನಾನು ನನ್ನ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಕೆಲಸಮಾಡುವವರು ಮತ್ತು ಪ್ರತಿಭಾವಂತರಿಗೆ ನಾನು ಶರಣಾಗುತ್ತೇನೆ ಅಂತಹ ಸ್ವಭಾವ ನನ್ನಾಗಿದೆ ಎಂದು ತಮ್ಮ ಹಿತ ನುಡಿಗಳನ್ನಾಡಿದರು.
ವಿಶ್ವವಿದ್ಯಾನಿಲಯದ ಪ್ರಭಾರಿ ಕುಲಪತಿಯಾಗಿದ್ದ ಡಾ.ಸುಯಮೀಂದ್ರ ಕುಲಕರ್ಣಿ ಅವರು ನೂತನ ಕುಲಪತಿಗಳಿಗೆ ಸ್ವಾಗತ ಕೋರುತ್ತಾ ಮಾತನಾಡಿದ ಅವರು, ವಿಶ್ವವಿದ್ಯಾನಿಲಯವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯತ್ತ ಸಾಗಿಸಲು ನಾವೆಲ್ಲರೂ ನೂತನ ಕುಲಪತಿಗಳ ಆಶಯ ಆದರ್ಶಗಳೊಂದಿಗೆ ಕೈ ಜೋಡಿಸೋಣ ಎನ್ನುತ್ತಾ ಶುಭ ಹಾರೈಸಿದರು.
ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವರಾದ ಡಾ.ಚನ್ನಪ್ಪ.ಎ ಕೆ.ಎ.ಎಸ್.(ಸೀನಿಯರ್ ಸೂಪರ್ ಟೈಂ ಸ್ಕೇಲ್)ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಹಿಂದೆ ಶೈಕ್ಷಣಿಕ ಗುಣಮಟ್ಟ ನೋಡಿದಾಗ, ಇಂದಿನ ಮಕ್ಕಳ ಶಿಕ್ಷಣ ಕಲಿಕೆಯ ಗುಣಮಟ್ಟ ಕಡಿಮೆಯಾಗುತ್ತಿದೆ. ಶೈಕ್ಷಣಿಕವಾಗಿ ಆಲೋಚನೆ ಮಾಡುವಂತಹ ಪ್ರಮುಖ ಕೇಂದ್ರ ಎಂದರೆ ವಿಶ್ವವಿದ್ಯಾನಿಲಯಗಳಾಗಿದ್ದು, ದೊಡ್ಡ ಹೊಣೆಗಾರಿಕೆಯಾಗಿದೆ.
ನಮ್ಮ ಮುಂದಿನ ಪೀಳಿಗೆ ಹೇಗಿರಬೇಕು ಎಂದು ರೂಪಿಸುವ ಉದ್ದೇಶವು ನಮ್ಮ ವಿಶ್ವವಿದ್ಯಾನಿಲಯದಿಂದ ಈಡೇರಬೇಕಿದೆ. ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ ಹಾಗೆ ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು. ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಭೌತಿಕವಾಗಿ ಅಭಿವೃದ್ಧಿ ಕಾಣಬೇಕು. ಸವಾಲುಗಳನ್ನು ಮೆಟ್ಟಿ ವಿಶ್ವವಿದ್ಯಾನಿಲಯವನ್ನು ಒಂದು ಗುಣಮಟ್ಟದ ಚೌಕಟ್ಟಿನಲ್ಲಿ ಕಾಪಾಡಿಕೊಂಡು ಬೆಳೆಸಬೇಕು ಇದಕ್ಕೆ ನಮ್ಮೆಲ್ಲರ ಸಹಕಾರ ಕುಲಪತಿಗಳಿಗೆ ನೀಡೋಣ ಮಾದರಿ ವಿಶ್ವವಿದ್ಯಾನಿಲಯವನ್ನಾಗಿ ನಿರ್ಮಾಣ ಮಾಡೋಣ ಎಂದು ನೂತನ ಕುಲಪತಿಗಳಿಗೆ ಸ್ವಾಗತ ಕೋರುತ್ತಾ ಅವರು ತಿಳಿಸಿದರು.
ವಿವಿಯ ಕುಲಸಚಿವರು(ಮೌಲ್ಯಮಾಪನ) ಜ್ಯೋತಿ ದಮ್ಮ ಪ್ರಕಾಶ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಲಾನಿಕಾಯದ ಡೀನ್ ಪ್ರೊ.ಪಾರ್ವತಿ ಸಿ.ಎಸ್., ವಾಣಿಜ್ಯ ನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ ಉಪಸ್ಥಿತರಿದ್ದರು.
ವಿವಿಯ ಉಪಕುಲಸಚಿವ ಹಾಗೂ ಹಣಕಾಸು ಅಧಿಕಾರಿ ಡಾ.ಕೆ.ವೆಂಕಟೇಶ್ ಅವರು ನೂತನ ಕುಲಪತಿಯವರನ್ನು ಪರಿಚಯಿಸಿ ಸ್ವಾಗತಿಸಿದರು.
ಕನ್ನಡ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಶರಣಪ್ಪ ಛಲುವಾದಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಕಾಲೇಜಿನವರು ನೂತನ ಕುಲಪತಿಗಳಿಗೆ ಸ್ವಾಗತಕೋರಿ ಸನ್ಮಾನಿಸಿ ಗೌರವಿಸಿದರು. ವಿಶ್ವವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್