ರಾಯಚೂರು, 06 ಜುಲೈ (ಹಿ.ಸ.) :
ಆ್ಯಂಕರ್ : ರಾಯಚೂರು ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ವೃತ್ತಗಳ ಅಭಿವೃದ್ಧಿ ಹಾಗೂ ಉನ್ನತೀಕಣ ಕಾಮಗಾರಿಗಳ ಕುರಿತು ಚರ್ಚಿಸುವ ಮಹತ್ವದ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಅಭಿವೃದ್ಧಿಯ ಪ್ರಾತ್ಯಕ್ಷಿಕೆಯ 3ಡಿ ಡಿಜೈನ್ ತೋರಿಸಲಾಯಿತು.
ಈ ವೃತ್ತದಲ್ಲಿ ಯಾವುದೇ ಸಿಗ್ನಲ್ ಇರುವುದಿಲ್ಲ. ಡಾ.ಅಂಬೇಡ್ಕರ್ ಅವರ ಬದುಕಿನ ಗಾಥೆಯ ಸಂಕ್ಷಿಪ್ತ ಮಾಹಿತಿ, ಪುತ್ಥಳಿ, ಪಾರ್ಲಿಮೆಂಟ್ ಮತ್ತು ಸಂವಿಧಾನ ಗ್ರಂಥದ ಮಾದರಿಯೊಂದಿಗೆ ವೃತ್ತವು ವಿನೂತನವಾಗಿ ನಿರ್ಮಾಣವಾಗಲಿದೆ.
ವೃತ್ತದಲ್ಲಿ ಗ್ರೀನ್ ಪಾರ್ಕ್, ರಕ್ಷಣೆಗಾಗಿ ಬ್ಯಾರಿಕೇಡ್ ವಾಲ್ ಸೇರಿದಂತೆ ವಿನೂತನ ರೀತಿಯಲ್ಲಿ ಸಿದ್ಧವಾಗುವ ವೃತ್ತದ ಮಾದರಿ ನಕ್ಷೆಯನ್ನು ಪ್ರದರ್ಶಿಸಲಾಯಿತು. ಇದೆ ವೇಳೆ ಮಾಸ್ಟರ್ ವಿಡಿಯೋವನ್ನು ಸಹ ಪ್ರದರ್ಶಿಸಲಾಯಿತು.
ದಿನಾಚರಣೆಯ ವೇಳೆ ಮುಖಂಡರು ಮನವಿ ಮಾಡಿದಂತೆ ಜಿಲ್ಲಾಡಳಿತವು ರಾಯಚೂರು ನಗರದಲ್ಲಿ ಡಾ.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ವೃತ್ತಗಳ ನವೀಕರಣಕ್ಕೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ಮುಂದಾಗಿರುವುದು ಅಭಿನಂದನಾರ್ಹ ಕಾರ್ಯವಾಗಿದೆ. ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಎರಡೂ ವೃತ್ತಗಳನ್ನು ನಿರ್ಮಿಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮನವಿ ಮಾಡಿದರು.
ಹೋರಾಟಕ್ಕೆ ಸ್ಥಳವಕಾಶ ಕಲ್ಪಿಸಿ: ವೃತ್ತವು ಅದ್ಭುತವಾಗಿ ನಿರ್ಮಾಣವಾಗುತ್ತಿರುವುದಕ್ಕೆ ನಾವು ಅಭಿನಂದನೆ ತಿಳಿಸುತ್ತೇವೆ. ಡಾ.ಅಂಬೇಡ್ಕರ್ ಅಂದರೆ ನಮಗೆ ಹೋರಾಟದ ಸಂಕೇತವಾಗಿದೆ. ಹೀಗಾಗಿ ಡಾ.ಅಂಬೇಡ್ಕರ್ ಅವರ ಪುತ್ಥಳಿ ಎದುರಿಗೆ ಕನಿಷ್ಟ 500 ಜನರು ಕುಳಿತು ಪ್ರತಿಭಟಿಸುವುದಕ್ಕೆ ನೂತನ ವೃತ್ತದ ಬಳಿಯಲ್ಲಿ ಸ್ಥಳವಕಾಶ ಕಲ್ಪಿಸಬೇಕು ಎಂದು ಎಲ್ಲ ಮುಖಂಡರು ಸಭೆಯಲ್ಲಿ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಿ: ಬಸ್ ನಿಲ್ದಾಣದ ಬಳಿಯಲ್ಲಿ ವಿನೂತನವಾಗಿ ಅಂಬೇಡ್ಕರ್ ಅವರ ವೃತ್ತ ನಿರ್ಮಾಣದ ಜೊತೆಗೆ ವೃತ್ತದ ಬಳಿಯಲ್ಲಿ ಖಾಲಿ ಇರುವ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು. ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಹ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಿಸಬೇಕು ಎಂದು ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದ ಗಣ್ಯರು: ರಾಯಚೂರು ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಕೋಟೆಯ ಕಂದಕವನ್ನು ಶುಚಿಗೊಳಿಸುವ ಕಾರ್ಯವು ಇದುವರೆಗೆ ನಡೆದೇ ಇರಲಿಲ್ಲ. ಈಗ ಕಂದಕದ ಸ್ವಚ್ಛತಾ ಕಾರ್ಯ ನಡೆಯುತ್ತಿರುವುದು ಇತಿಹಾಸವಾಗಿದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಅಭಿನಂದಿಸುತ್ತೇವೆ ಎಂದು ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ತಿಳಿಸಿದರು.
ಜನರ ಸಹಕಾರ ಅಗತ್ಯ: ರಾಯಚೂರ ನಗರವು ಸುಂದರವಾಗಿ ನಿರ್ಮಾಣವಾಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ರಾಯಚೂರ ನಗರಕ್ಕೆ ವಿಮಾನ ನಿಲ್ದಾಣ ಬರಲಿದೆ. ಜಾಗತಿಕವಾಗಿ ರಾಯಚೂರ ಗಮನ ಸೆಳೆಯುವ ನಿಟ್ಟಿನಲ್ಲಿ ಯೋಚಿಸಿ, ನಾನಾ ಯೋಜನೆಗಳ ಕಾರ್ಯರೂಪಕ್ಕೆ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮುಂದಾಗುತ್ತಿದೆ. ರಾಯಚೂರ ನಗರದಲ್ಲಿ ಈ ಎರಡೂ ವೃತ್ತಗಳ ನಿರ್ಮಾಣ ಕಾರ್ಯವು ಬರೀ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಕಾರ್ಯವಲ್ಲ; ಇದಕ್ಕೆ ನಗರದ ಎಲ್ಲ ಸಂಘ ಸಂಸ್ಥೆಗಳ ಮುಖಂಡರು, ಗಣ್ಯರು, ಸಾರ್ವಜನಿಕರು ಸಹಕರಿಸಬೇಕು. ಇದು ಟೀಮ್ ವರ್ಕ್ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
15 ದಿನಗಳೊಳಗೆ ಟೆಂಡರ್: ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆ ವೇಳೆಯಲ್ಲಿ ಪ್ರತಿ ವರ್ಷವೂ ದಲಿತ ಸಮುದಾಯಗಳ ಮುಖಂಡರು, ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ವೃತ್ತಗಳನ್ನು ಅಭಿವೃದ್ದಿಗೊಳಿಸಬೇಕು ಎಂದು ಮನವಿ ಮಾಡುತ್ತಿರುವುದಕ್ಕೆ ಸ್ಪಂದಿಸಿ, ಇದೀಗ ಸಭೆ ಕರೆದು ಅಭಿಪ್ರಾಯ, ಸಲಹೆ ಪಡೆಯಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳ ಮುಖಂಡರ ಮನವಿಯಂತೆ ಎರಡೂ ವೃತ್ತಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ 15 ದಿನಗಳೊಳಗೆ ಟೆಂಡರ್ ಕರೆದು ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಎಂ. ಚಿದಾನಂದ, ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರಾದ ಎಂ.ವಿರುಪಾಕ್ಷಪ್ಪ, ರವಿ ಜಾಲ್ದಾರ್, ಪರಶುರಾಮ ಅರೋಲಿ, ಎಂ ಬಸವರಾಜ ಭಂಡಾರಿ, ಮಂಚಾಲ ಭೀಮಯ್ಯ, ಎಂ ವಸಂತಕುಮಾರ, ಜಿ ಮುದ್ದುಕೃಷ್ಣ, ಎಸ್ ನರಸಿಂಹಲು, ವಿಶ್ವನಾಥ ಹಟ್ಟಿ, ಎನ್ ಜಂಬಣ್ಣ, ರಂಗ ಮುನಿದಾಸ್, ಎಂ ಈರಣ್ಣ, ಭಾಷ್ಕರ್ ರಾಜ್, ಎಸ್ ಮಲ್ಲೇಶಿ ಕೊಲಿಮಿ, ಪ್ರಭು ನಾಯಕ, ಹನುಮೇಶ ಅರೋಲಿ, ವಿರುಪಾಕ್ಷಿ, ಭವನೇಶ ಹಾಗೂ ಇನ್ನೀತರ ಮುಖಂಡರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್