ಲಿಂಗಸಗೂರು, 06 ಜುಲೈ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಯರಗುಂಟಿಯಲ್ಲಿ ಗ್ರಾಮದಲ್ಲಿ ಅಲಾವಿ ಕುಣಿಯಲ್ಲಿ ಬೆಂಕಿ ಹಾಯುವಾಗ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯು ಯರಗುಂಟಿ ಗ್ರಾಮದ ಹನುಮಂತ (33) ಎಂದು ಸ್ಥಳಿಯರು ತಿಳಿಸಿದ್ದಾರೆ. ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ದೊಡ್ಡ ಅಗ್ನಿಕುಂಡ ಸಿದ್ಧಪಡಿಸಿದ್ದು, ಅದನ್ನು ಹಾಯ್ದು ಹೋಗುವಾಗ ಕಟ್ಟಿಗೆಯಲ್ಲಿ ಕಾಲು ಸಿಲುಕಿಕೊಂಡು ದುರ್ಘಟನೆ ಸಂಭವಿಸಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಮುಸ್ಲಿಂ ಹಾಗೂ ಹಿಂದೂಗಳು ಭಾವೈಕ್ಯತೆಯಿಂದ ಒಗ್ಗೂಡಿ ಆಚರಿಸುತ್ತಾರೆ. ಮೊಹರಂ ಹಬ್ಬದ 9ನೇ ದಿನದ ಅಂಗವಾಗಿ ಗ್ರಾಮೀಣ ಭಾಗದಲ್ಲಿ ಪಂಜಿನ ಮೆರವಣಿಗೆ ನಡೆಯುತ್ತದೆ. 10ನೇ ದಿನ ದೇವರುಗಳ ಮೆರವಣಿಗೆ ಮೂಲಕ ಕಳುಹಿಸುವುದು ಸಂಪ್ರದಾಯ. ಗ್ರಾಮದಲ್ಲಿ ಕುಣಿಗಳನ್ನು ಅಗೆದು ಬೆಂಕಿ ಹಾಕಿ ಸುತ್ತಲೂ ಕುಣಿದು ಸಂಭ್ರಮಿಸುವುದು ವಾಡಿಕೆ ಇದೆ. ಈ ರೀತಿ ಅಲಾಯಿ ಕುಣಿಗಳ ಹಾದು ಹೋಗುವಾಗ ಈ ದುರ್ಘಟನೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್