ಬಳ್ಳಾರಿ, 06 ಜುಲೈ (ಹಿ.ಸ.) :
ಆ್ಯಂಕರ್ : ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಗೊಳಿಸಲು, ಅಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಂ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 9ರ ಬುಧವಾರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದೆ.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡರಾದ ಜೆ. ಸತ್ಯಬಾಬು, ಡಾ. ಪ್ರಮೋದ್.ಎನ್, ಹೆಚ್.ಎ. ಆದಿಮೂರ್ತಿ, ಸೂರ್ಯನಾರಾಯಣ. ವಿ, ಘನ ಮಲ್ಲಿಕಾರ್ಜುನ, ಹನುಮಂತಪ್ಪ ಇನ್ನಿತರರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ.
ಜುಲೈ 9ರ ಬುಧವಾರ ಬಳ್ಳಾರಿಯ ಗಾಂಧಿಭವನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಎಐಯುಟಿಯುಸಿ, ಸಿಐಟಿಯು, ಎಐಟಿಯುಸಿ, ವಿಮಾ ನೌಕರರ ಸಂಘ, ಬ್ಯಾಂಕ್ ನೌಕರರ ಸಂಘಗಳು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಸಂಘಗಳು, ಗಣಿ ಕಾರ್ಮಿಕರ ಸಂಘ, ಹಾಸ್ಟೆಲ್, ವಿಮ್ಸ್ ಗುತ್ತಿಗೆ ಕಾರ್ಮಿಕರ ಸಂಘಗಳು, ಇನ್ನಿತರ ಕಾರ್ಮಿಕ ಸಂಘಗಳು, ಕರ್ನಾಟಕ ಜನಶಕ್ತಿ, ರೈತ ಸಂಘಟನೆಗಳಾದ ಎಐಕೆಕೆಎಂಎಸ್, ಕೆಪಿಆರ್‍ಎಸ್, ಕರ್ನಾಟಕ ರಾಜ್ಯ ರೈತ ಸಂಘ ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದರು.
ಎಐಯುಟಿಯುಸಿಯ ಸೋಮಶೇಖರ ಗೌಡ, ಕೆಎಸ್‍ಆರ್‍ಟಿಸಿ ಯುನಿಯನ್‍ನ ಚೆನ್ನಪ್ಪ, ಬಸವರಾಜ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಯುನಿಯನ್‍ನ ಕೀರ್ತಿರಾಜ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಸಂಘದ ವೇಣಗೋಪಾಲ್ ಶೆಟ್ಟಿ , ಅಂಗನವಾಡಿ ನೌಕರರ ಸಂಘದ ಮುಖಂಡರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್