ವಿಜಯಪುರ, 06 ಜುಲೈ (ಹಿ.ಸ.) :
ಆ್ಯಂಕರ್ : ಡ್ರ‍್ಯಾಗನ್ ಫ್ರೂಟ್ ಇಂದಿನ ಜನಪ್ರಿಯ ಹಣ್ಣುಗಳಲ್ಲಿ ಒಂದು. ರಟಗಳೆ ಅಥವಾ ಕಪ್ಪು ನೆಲದ ಕೆಂಪು ಹಣ್ಣು ಎಂದೂ ಕರೆಯಲ್ಪಡುವ ಡ್ರ‍್ಯಾಗನ್ ಫ್ರೂಟ್ ಉಷ್ಣವಲಯದ ಹಣ್ಣಾಗಿದ್ದು ರೋಮಾಂಚಕ ಬಣ್ಣ, ವಿಶಿಷ್ಟ ಆಕಾರ ಮತ್ತು ಸಮೃದ್ಧ ಪೌಷ್ಟಿಕಾಂಶಗಳಿಂದಾಗಿ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ.
ಬಸವನಾಡು ವಿಜಯಪುರದಲ್ಲಿ ಈ ಹಣ್ಣನ್ನು ಸಾಕಷ್ಟು ಜನ ರೈತರು ಬೆಳೆಯುತ್ತಿದ್ದಾರೆ. ಡ್ರ್ಯಾಗನ್ ಹಣ್ಣಿನ ಬಗ್ಗೆ ಜಾಗೃತಿ ಮೂಡಿಸಲು ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.
ಡ್ರ್ಯಾಗನ್ ಹಣ್ಣು ಸಾಮಾನ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುತ್ತದೆ ಮತ್ತು ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ನಡೆಯಿತು.
ಔಷಧಿ ವ್ಯಾಪಾರಿ ಹಾಗೂ ಪ್ರಗತಿ ಪರ ರೈತ ಚಂದ್ರಶೇಖರ ಮಾಲಿಪಾಟೀಲ ಇವರು ಕಳೆದ ಮೂರು ವರ್ಷಗಳಿಂದ ತಮ್ಮ ಕಪ್ಪು ನೆಲದಲ್ಲಿ ಕೆಂಪು ಹಣ್ಣನ್ನು ಬೆಳೆಯುತ್ತಿದ್ದಾರೆ. ತಮ್ಮ ಮೂರು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಬೆಳೆಯುವ ಮೂಲಕ ಪ್ರಗತಿಪರ ಕೃಷಿ ಮಾಡುತ್ತಿದ್ದಾರೆ. ತಾವಿಷ್ಟೇ ಲಾಭ ಗಳಿಸಬಾರದು ತಮ್ಮಂತೆ ಇತರೆ ರೈತರು ಲಾಭ ಗಳಿಸಲಿ ಎಂಬ ಉದ್ದೇಶದಿಂದ ತಮ್ಮ ಜಮೀನಿನಲ್ಲಿ ಕ್ಷೇತ್ರೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಣೇತ್ರ ಅರಕೇರಿ ಅಮೋಘಸಿದ್ದ ದೇವಸ್ಥಾನದ ಟ್ರಸ್ಟಿಗಳಾದ ಅಪ್ಪು ಒಡೆಯರ್, ಮಾಜಿ ಶಾಸಕ ಪ್ರೋ.ರಾಜು ಆಲಗೂರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆಶುಕವಿ ಸಿದ್ದಪ್ಪ ಬಿದರಿ, ವಸಂತ ಅಂಗಡಿ, ಉದ್ಯಮಿ ನಾಡಗೌಡ,
ನಿವೃತ್ತ ಡಿವೈಎಸ್ಪಿ ಬಿ.ಆರ್. ಚೌಕಿಮಠ, ತಜ್ಞ ವೈದ್ಯ ಡಾ.ಬಾಬುರಾಜೇಂದ್ರ ನಾಯಿಕ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರಫುಲ್ ಮಂಗಾನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ನೀರಾವರಿ ಕ್ರಾಂತಿ ಮಾಡಿದ್ದು ವಿಜಯಪುರ ಜಿಲ್ಲೆಯ ಜಮೀನುಗಳಿಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆ ಬಂದಂತಾಗಿದೆ ಎಂದು ಅತಿಥಿಗಳು ಮಾತನಾಡಿರು.
ಇನ್ನೂ ಕಾರ್ಯಕ್ರಮದಲ್ಲಿ ಡ್ರ್ಯಾಗನ್ ಬೆಳೆ ಕಂಡು ರೈತರು ಹರ್ಷ ವ್ಯಕ್ತಪಡಿಸಿದರು. ಔಷಧಿ ವ್ಯಾಪಾರಸ್ಥರಾಗಿದ್ದರೂ ಕೂಡ ಭೂತಾಯಿಯ ಸೇವೆ ಮಾಡಲು ಜಮೀನು ತೆಗೆದುಕೊಂಡು ಬಂಗಾರದ ಬೆಳೆ ಬೆಳೆದು ಲಾಭ ಗಳಿಸುವದಷ್ಟೇ ಅಲ್ಲದೇ ತಮ್ಮಂತೆ ಬೇರೆ ರೈತರು ಕೂಡಾ ಲಾಭ ಗಳಿಸಲಿ ಎನ್ನುವ ಸದುದ್ದೇಶದಿಂದ ಇಂತಹ ಕ್ಷೇತ್ರೋತ್ಸವ ಆಯೋಜನೆ ಮಾಡಿದ್ದಕ್ಕಾಗಿ ಶ್ಲಾಘಿಸಿದರು.
ಆಶುಕವಿ ಸಿದ್ದಪ್ಪ ಬಿದರಿಯವರ ಜಾನಪದ ಆಶು ಕವಿತೆಗಳು ನೆರೆದಿದ್ದವರ ಮನಗೆದ್ದವು. ಇಂದಿನ ಸಿಟಿ ಜನತೆ ಕೇವಲ ಲೆಕ್ಕಾಚಾರದಲ್ಲಿ ತೊಡಗಿ ಹೊಲದಲ್ಲಿ ಎನು ಉಳಿಯುತ್ತದೆ ಎಂದು ಲೆಕ್ಕ ಹಾಕುತ್ತಾರೆ. ಭೂಮಿ ನಿಮಗೂ ಅನ್ನ ನೀಡುತ್ತದೆ, ನಿಮ್ಮ ಹಿಂದಿನವರಿಗೂ ಅನ್ನ ನೀಡುತ್ತದೆ. ಹೀಗಾಗಿ ಜಮೀನು ಮಾರದೇ ಭೂತಾಯಿಯ ಸೇವೆ ಮಾಡಿ ಎಂದು ಕಿವಿಮಾತು ಹೇಳಿ ರೈತರಿಗೆ ಭೂ ತಾಯಿಯ ಮಹತ್ವದ ಜಾಗೃತಿ ಮೂಡಿಸಿದರು.
ಅಲ್ಲದೆ ರೈತರು ದಲ್ಲಾಳಿಗಳ ಬಳಿಗೆ ಹೋಗಬೇಡಿ, ನೇರವಾಗಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಿ ಎಂದರು.
ರೈತರ ಬಳಿ ಚೌಕಾಸಿ ಮಾಡದೇ ರೈತರ ಬಳಿಯೇ ಖರೀದಿ ಮಾಡಿ ಎಂದು ಕರೆ ನೀಡಿದರು.
ಒಟ್ಟಾರೆ ಡ್ರ್ಯಾಗನ್ ಹಣ್ಣಿನ ಕ್ಷೇತ್ರೋತ್ಸವವು ಡ್ರ್ಯಾಗನ್ ಹಣ್ಣಿನ ಜೊತೆಗೆ ಭೂಮಿ ತಾಯಿಯ ಮಹತ್ವ, ರೈತರು ದುಶ್ಚಟಗಳನ್ನ ಮಾಡಬಾರದು, ದಲ್ಲಾಳಿಗಳ ಕುರಿತು ಜಾಗೃತಿ ಸೇರಿದಂತೆ ಹಲವು ವಿಷಯಗಳ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande