ಕೊಪ್ಪಳ, 04 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹತ್ತಿ ಬಿತ್ತನೆ ಬೀಜ ಉತ್ಪಾದನಾ ಕ್ಷೇತ್ರದಲ್ಲಿ ಬಂದ ಸಂಪೂರ್ಣ ಇಳುವರಿಯನ್ನು ಸಂಬಂಧಿಸಿದ ಕಂಪನಿಗಳು ಖರೀದಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ರೈತ ಮುಖಂಡರು, ಬೀಜ ಉತ್ಪಾದಕ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಕೆಲವು ಸೂಚನೆಗಳನ್ನು ನೀಡಿ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಭೆಯಲ್ಲಿ ಸೂಚಿಸಿರುವುದರಿಂದ ಇದನ್ನು ಉಲ್ಲಂಘಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹತ್ತಿ ಬಿತ್ತನೆ ಬೀಜ ಉತ್ಪಾದನಾ ಕ್ಷೇತ್ರದಲ್ಲಿ ಬಂದ ಇಳುವರಿಯನ್ನು ಯಾವುದೇ ಗರಿಷ್ಟ ಮಿತಿ ಹಾಕದೆ ಸಂಪೂರ್ಣವಾಗಿ ಕಂಪನಿಗಳು ಖರೀದಿ ಮಾಡಬೇಕು. ಈ ವರ್ಷದಿಂದ ರೈತರು, ಬೀಜ ಸಂಘಟಕರು ಹಾಗೂ ಕಂಪನಿಗಳ ನಡುವೆ ಕರಾರು ಒಪ್ಪಂದ ಮಾಡಿಕೊಳ್ಳಬೇಕು. ಎಲ್ಲಾ ಸಂಘಟಕರ ಹೆಸರು, ಪೆÇೀನ್ ನಂಬರ್‍ಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಬಿತ್ತನೆ ಬೀಜ ಕಂಪನಿಗಳು ತಾವು ನೀಡಿರುವ ಉತ್ಪಾದನಾ ಕ್ಷೇತ್ರಗಳ ಪಟ್ಟಿ, ರೈತರ ಹೆಸರು, ಸರ್ವೆ ಸಂಖ್ಯೆ ಮತ್ತು ಸಂಘಟಕರ ವಿವರಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು.
ಇನ್ನು ಮುಂದೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಹಾಗೂ ಬೀಜೋತ್ಪಾದನೆ ಮಾಡುವ ರೈತರು ಕಡ್ಡಾಯವಾಗಿ ಕರಾರು ಒಪ್ಪಂದ ಮಾಡಿಕೊಂಡು, ಒಪ್ಪಂದದಲ್ಲಿ ನಮೂದು ಮಾಡಲಾದ ಅಂಶಗಳಂತೆ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್