ಬಳ್ಳಾರಿ, 04 ಜುಲೈ (ಹಿ.ಸ.) :
ಆ್ಯಂಕರ್ : `ಬೇಡ ಜಂಗಮ' ಎಸ್ಸಿ ಜಾತಿ ಪ್ರಮಾಣಪತ್ರದ ಕುರಿತು ಬೀದರ್‍ನ ರವೀಂದ್ರಸ್ವಾಮಿ ಅವರ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‍ನ ಕಲಬುರ್ಗಿಪೀಠ ನೀಡಿರುವ ತೀರ್ಪುನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಹೇಳಿದೆ.
ಈ ಕುರಿತು ಪ್ರಕಟಣೆ ನೀಡಿರುವ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ, ಜಿ.ಎಂ. ವಿಶ್ವನಾಥಸ್ವಾಮಿ ಮತ್ತು ಪದಾಧಿಕಾರಿಗಳು, ಜಂಗಮ ಸಮುದಾಯದ ಕುಲ ಕಸುಬಿನ ಅಡಿ ಬರುವ `ಬೇಡ ಜಂಗಮ' ಜಾತಿಯ ಮೂಲ, ಹುಟ್ಟು, ಗುರುತು, ಪ್ರದೇಶ, ಸಂವಿಧಾನಾತ್ಮಕ ಬೆಂಬಲದ ಬಗ್ಗೆ ಅರಿವಿಲ್ಲದ ಕೆಲವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿ ಎಂದಿದ್ದಾರೆ.
ಸ್ವಾತಂತ್ರ್ಯ ಪೂರ್ವದ ನಿಜಾಮ್ (ನೈಜಾಮ್) ಪ್ರಾಂತ್ಯದಲ್ಲಿನ ಜಂಗಮರು ವರ್ಷ ವಿಡೀ ನಡೆಸಿ ಕೊಂಡು ಬರುವ ಧಾರ್ಮಿಕ ಕಾರ್ಯಗಳಿಗೆ ಫಲವಾಗಿ ವರ್ಷಕ್ಕೊಮ್ಮೆ ಜನರು ನೀಡುವ ಧಾನ್ಯಗಳನ್ನು ದಾನವಾಗಿ ಪಡೆಯುತ್ತಿದ್ದರು. ಇದಕ್ಕೆ `ಬೇಡ' ಎಂಬ ಅರ್ಥವಿದ್ದು, ಇದನ್ನೇ ಕಾಯಕ ಮಾಡಿಕೊಂಡವರಿಗೆ `ಬೇಡ ಜಂಗಮರು' ಎಂದು ಗುರುತಿಸಿ, ಸಂಭೋಧಿಸಲಾಗುತ್ತದೆ.
1901ರ ಸೆನ್ಸಸ್ ಆಫ್ ಇಂಡಿಯಾ ದಾಖಲೆಗಳಲ್ಲಿ `ಬೇಡ ಜಂಗಮ'ರನ್ನು ಕೆಳದರ್ಜೆಯ `ಧಾರ್ಮಿಕ ಭಿಕ್ಷುಕರು' (ಪ್ರೀಸ್ಟ್‍ಲೀ ಬೆಗ್ಗರ್ಸ್, ಮೆಂಡಿಕೆಂಟ್ಸ್) ಎಂದು ಕರೆದು, ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಮೂಲ ಸಂವಿಧಾನದ ಜಾತಿ ಪಟ್ಟಿಯಲ್ಲಿ ಮತ್ತು ಜಾತಿವಾರು ಮೀಸಲಾತಿ ಪಟ್ಟಿಯಲ್ಲಿರುವ ಡಿಪ್ರೆಸ್ಟ್ ಕ್ಲಾಸಸ್ ಪಟ್ಟಿಯಲ್ಲಿನ 34 ಕೆಳದರ್ಜೆ ಜಾತಿಗಳ ಜೊತೆಗೆ ಜಂಗಮರನ್ನು ಸೇರಿಸಲಾಗಿದೆ.
ಜಂಗಮರನ್ನು ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಂದ ದೂರವಿರಿಸಿದ ಕಾರಣ ಅಧಿಕೃತವಾಗಿಯೇ ಭಾರತ ಸರ್ಕಾರ ಅಧಿನಿಯಮ-1935ರ ಪ್ರಕಾರ ಎಸ್ಪಿ ಎಂದು ಪರಿಗಣಿಸಲಾಗಿದೆ. ಚಾರಿತ್ರಿಕ ದಾಖಲೆಗಳಿದ್ದರೂ `ಎಸ್ಸಿ ಮೀಸಲು ದುರ್ಬಳಕೆ' ಎಂದು ತಪ್ಪು ಮಾಹಿತಿ ಹಬ್ಬಿಸುತ್ತಿರುವುದನ್ನು ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್