ಕೊಪ್ಪಳ, 31 ಜುಲೈ (ಹಿ.ಸ.) :
ಆ್ಯಂಕರ್ : ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮಕ್ಕಳ ಕಾಣೆ ಪ್ರಕರಣಗಳನ್ನು “ಮಕ್ಕಳ ಅಪಹರಣ”ವೆಂದು ದಾಖಲಿಸಿ ತನಿಖೆಯನ್ನು ಕೈಗೊಳ್ಳಬೇಕು ಜಿಲ್ಲಾ ಪೊಲಿಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಪತ್ತೆಗಾಗಿ ನೂತನವಾಗಿ ರಚನೆಯಾದ ವಿಶೇಷ ಕಾರ್ಯಪಡೆಯ” ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಕ್ಕಳ ಕಾಣೆ ಪ್ರಕರಣಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಹ ಮಕ್ಕಳ ಕಾಣೆ ಪ್ರಕರಣಗಳನ್ನು “ಮಕ್ಕಳ ಅಪಹರಣ”ವೆಂದು ದಾಖಲಿಸಿ ತನಿಖೆಯನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದು, ಅದರನ್ವಯ ಜಿಲ್ಲಾ ಪೊಲೀಸ್ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು, ಅದರಲ್ಲಿ ಬಹುತೇಕವುಗಳು ಪ್ರೇಮ ಪ್ರಕರಣಗಳಾಗಿವೆ ಎಂದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019ರನ್ವಯ 18 ವರ್ಷದೊಳಗಿನ ಎಲ್ಲರೂ ಮಕ್ಕಳು ಆಗಿದ್ದಾರೆ. ಮಕ್ಕಳ ಸಮ್ಮತಿಯೊಂದಿಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿಯೂ ಅಪ್ರಾಪ್ತ ವಯಸ್ಸಿನ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋದಲ್ಲಿ ಮತ್ತು ಹಾಗೆ ಮಗುವನ್ನು ಕರೆದುಕೊಂಡ ಹೋದವರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿ ಮುಂದೆ ಅದರ ವಿಚಾರಣೆ ನಡೆದು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರಲ್ಲಿ ಪ್ರಕರಣವಾಗಿ ದಾಖಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆ-ಕಾಲೇಜು ಮತ್ತು ಸಮುದಾಯದಲ್ಲಿ ಹೆಚ್ಚು ಜಾಗೃತಿಯನ್ನು ಮೂಡಿಸಬೇಕು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೆರೆದ ಮನೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರು ಮಾತನಾಡಿ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಾಗಿ ಸಮಿತಿಗಳು ರಚನೆಯಾಗಿರುತ್ತವೆ’. ಈ ಸಮಿತಿಗಳು ಮತ್ತಷ್ಟು ಸಕ್ರೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಬೀಟ್ ಹಂತದ ಪೊಲೀಸ್ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಮಕ್ಕಳ ರಕ್ಷಣೆಯ ಕಾವಲು ಸಮಿತಿ ಸಭೆಗಳಲ್ಲಿ ಭಾಗವಹಿಸಿ, ಶಾಲಾ ಮತ್ತು ಕಾಲೇಜುಗಳ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿಯನ್ನು ಮೂಡಿಸಬೇಕು ಎಂದು ಪೊಲೀಸ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಮಾತನಾಡಿ, ಮಕ್ಕಳಿಗೆ ಮಕ್ಕಳ ಪರವಾದ ಕಾನೂನುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಅವರನ್ನು ಪ್ರಜ್ಞಾವಂತರಾಗಿಸುವ ಮೂಲಕ ಮಕ್ಕಳ ಮೇಲಾಗುವ ವಿವಿಧ ರೀತಿಯ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಈ ಬಗ್ಗೆ ಸಮುದಾಯದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಗತ್ಯ ಸಹಕಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುವುದು ಎಂದರು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು, ಸಭೆಯಲ್ಲಿ ಎಲ್ಲರಿಗೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ್ ಶೆಟ್ಟೆಪ್ಪನವರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಕಡಗದ್, ಸದಸ್ಯೆ ದಿವ್ಯಾ ಜೋಗಿ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ರವಿ ಗುಡ್ಡದಮೇಗಳ, ನೇತ್ರಾ ಪಾಟೀಲ್, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿ ಆಶಾ, ಜೈ ಕುಮಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿ.ಪಿ.ಓ ಬಸವರಾಜ ಸೇರಿದಂತೆ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಮತ್ತು ಕಾಣೆಯಾದ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ(ಅಸಾಂಸ್ಥಿಕ) ಪ್ರಶಾಂತ ರೆಡ್ಡಿ ಅವರು ಕೊನೆಯಲ್ಲಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್