ಕೊಪ್ಪಳ, 31 ಜುಲೈ (ಹಿ.ಸ.) :
ಆ್ಯಂಕರ್ : ಮಾನವ ಕಳ್ಳ ಸಾಗಾಣಿಕೆಯು ಒಂದು ಗಂಭೀರ ಅಪರಾಧವಾಗಿದ್ದು, ಮಾನವ ಸಾಗಾಣಿಕೆ ಕಂಡುಬಂದರೆ ದೂರು ದಾಖಲಿಸಬೇಕು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ ಅವರು ತಿಳಿಸಿದ್ದಾರೆ.
ಗುರುವಾರ ಕೊಪ್ಪಳ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಸಂಯಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ” ಪರಿಶಿಷ್ಟ ಜಾತಿ, ಪರಿಶಿಷ್ಡ ಪಂಗಡ ಕಾಯ್ದೆ ಹಾಗೂ ಖಾಯಂ ಜನತಾ ನ್ಯಾಯಲಯ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದರಿಂದ ಜನರು ಬಲವಂತವಾಗಿ, ಮೋಸದಿಂದ ಅಥವಾ ಬಲತ್ಕಾರದಿಂದ ದುಡಿಮೆ, ಲೈಂಗಿಕ ಶೋಷಣೆಗಾಗಿ ಸಾಗಿಸಲ್ಪಡುತ್ತಾರೆ. ಈ ಸಮಸ್ಯೆಯ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಇಂತಹ ಪ್ರಕರಣಗಳಿಗೆ ಸಿಲುಕಿಕೊಂಡವರಿಗೆ ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳು ಎಲ್ಲಾ ಹಂತದಲ್ಲೂ ಕ್ರಮವಹಿಸಬೇಕು ಎಂದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಯ್ದೆ ಮತ್ತು ಖಾಯಂ ಜನತಾ ನ್ಯಾಯಾಲಯ ಕುರಿತು ವಿವರವಾದ ಮಾಹಿತಿ ನೀಡಿದರು.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್ ಅವರು ಮಾತನಾಡಿ, ಮಾನವ ಸಾಗಾಣಿಕೆ ಹಳ್ಳಿಗಳಲ್ಲಿ, ನಗರಗಳಲ್ಲಿ ಕಂಡು ಬ0ದರೆ ದೂರು ದಾಖಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾಹಾಂತಯ್ಯ ಸ್ವಾಮಿ ಅವರು ಮಾತಾನಾಡಿ, ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿ ರಚನೆಯಾಗಿದ್ದು, ಇಂತಹ ಪ್ರಕರಣಗಳು ಕಂಡು ಬ0ದಲ್ಲಿ ಸಮಿತಿಯಲ್ಲಿ ಚರ್ಚಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ಕುಬಕಡ್ಡಿ ಅವರು “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ” ಕುರಿತು ಪ್ರತಿಜ್ಞಾ ವಿಧಿ ಭೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ್ ವಾಯ್ ಶೆಟ್ಟಪ್ಪನವರ್ ಅವರು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಮಾಡುವುದರ ಮೂಲಕ ಮಾನವನ ಅಂಗಾಂಗಗಳು ತೆಗೆದು ಇತರರಿಗೆ ಮಾರಾಟ ಮಾಡುವಂತಹ ಪ್ರಕ್ರಿಯೆಗಳು ನಡೆಯುತ್ತವೆ. ಇಂತಹ ಜಾಲ ಪತ್ತೆಯಾದಲ್ಲಿ ಹತ್ತಿರ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯವರಿಗೆ ಪ್ರತಿ 3 ತಿಂಗಳಿಗೊಮ್ಮೆ ಕಾವಲು ಸಮಿತಿ ಸಭೆ ನಡೆಸಿ, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೋಲಿಸರಿಗೆ ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಕೊಪ್ಪಳ ತಾಲ್ಲೂಕು ಪಂಚಾಯತಿ ಸಹಾಯ ಕ ನಿರ್ದೇಶಕ ಮಹೇಶ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಮೇಲ್ವಿಚಾರಕಿ ಚಂದ್ರಮ್ಮ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೋಟಗಾರ್ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪ ಗಂದಧ ಅವರು ಕೊನೆಯಲ್ಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು, ಜಿಲ್ಲಾ ಸಂಯೋಜಕಿ ಶ್ರೀದೇವಿ, ಜೆಂಡರ್ ಸ್ಪಷಲಿಸ್ಟ್ ಫಾತಿಮಾ, ಸಖಿ ಒನ್ ಸ್ಟಾಪಸೆಂಟರ್ ಮೇಲ್ವಚಾರಕಿ ಯಮುನಾ ಬೆಸ್ತರ್ ಸೇರಿದಂತೆ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಾಮತ್ವಾನಾ ಸಿಬ್ಬಂದಿ, ಕೌಟುಂಬಿಕ ಸಲಹಾ ಕೇಂದ್ರದ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್