ವಿಜಯಪುರ, 30 ಜುಲೈ (ಹಿ.ಸ.) :
ಆ್ಯಂಕರ್ : ನಿಡಗುಂದಿ ತಾಲೂಕ ಕೇಂದ್ರಕ್ಕೆ ಹೊಂದಿಕೊಂಡಿರುವ ಕಮದಾಳ ಪುನರ್ವಸತಿ ಕೇಂದ್ರದ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳಿದ್ದ ಸಚಿವರು, ಅನಿರೀಕ್ಷಿತವಾಗಿ ಸಂತ್ರಸ್ತರ ಅಹವಾಲು ಆಲಿಸಲು ಮುಂದಾದರು.
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯದ ಹಿನ್ನೀರಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊಲ-ಮನೆ, ಕೃಷಿ ಅವಲಂಬಿತ ಎಲ್ಲ ಬದುಕನ್ನು ಕಳೆದುಕೊಂಡ ನಮ್ಮನ್ನು ನಿಮ್ಮ ಮಡಿಲಿಗೆ ತಂದು ಹಾಕಿದ್ದಾರೆ. ನಿಡಗುಂದಿ ಭಾಗದ ಈ ಪುನರ್ವಸತಿ ಕೇಂದ್ರಕ್ಕೆ ಬಂದ ಮೇಲೆ ಕಷ್ಟದ ದಿನಗಳನ್ನು ಕಳೆಯುತ್ತಿದ್ದೆವು. ನೀವು ಆಯ್ಕೆಯಾಗಿ ಬಂದ ಮೇಲೆ ನಮ್ಮ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಕಂಡುಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಿ ಎಂದು ಸಂತ್ರಸ್ತರು ಸಂತೃಪ್ತಿ ವ್ಯಕ್ತಪಡಿಸಿದರು.
ಇದ್ದಲ್ಲದೇ ಬೀಳಗಿ ಭಾಗದಲ್ಲಿ ಯೋಜನೆ ನಿರಾಶ್ರಿತರಾದ ನಮಗೆ ಕೃಷ್ಣಾ ಭಾಗ್ಯ ಜಲ ನಿಗದಮದ ಪುನರ್ವಸತಿ-ಪುನರ್ ನಿರ್ಮಾಣ ವಿಭಾಗದಿಂದ ಇನ್ನೂ ಹಲವರಿಗೆ ಕೆಲವು ಸೌಲಭ್ಯ ಸಿಗಬೇಕಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಡುವಂತೆ ಮನವಿ ಮಾಡಿದರು.
ಇದಲ್ಲದೇ ಎರಡು ದಶಕಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಬಗೆ ಹರಿದಿದ್ದರೂ, ವಾರಕ್ಕೊಮ್ಮೆ ನೀರು ಬರುತ್ತಿದ್ದು, ದಿನ ಬಿಟ್ಟು ದಿನ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರಸ್ತೆಗೆ ಹರಿಯುವ ಕೊಳಚೆ ನೀರಿನ ಸಮಸ್ಯೆ ನೀಗಲು ಚರಂಡಿ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ನಿಡಗುಂದಿ ಪಕ್ಕದಲ್ಲೇ ನಿರ್ಮಾಣಗೊಂಡಿರುವ ಕಮದಾಳ, ಮಣಗೂರು, ಚಿನಿವಾಲ, ನಿಂಗಾಪುರ, ಗುಂಡನಪಲ್ಯ ಸೇರಿದಂತೆ ಇತರೆ ಪುನರ್ವಸತಿ ಕೇಂದ್ರಗಳಲ್ಲಿನ ಯೋಜನಾ ನಿರಾಶ್ರಿತರು ತಮ್ಮ ಸಮಸ್ಯೆ ನಿವೇದಿಸಿಕೊಂಡರು.
ಕೂಡಲೇ ಕೃಷ್ಣಾ ಭಾಗ್ಯ ಜಲ ನಿಗಮದ ಪುವರ್ನಸತಿ-ಪುನರ್ ನಿರ್ಮಾಣದ ಆಯುಕ್ತರಾದ ಸುನೀಲಕುಮಾರ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಬೀಳಗಿ ತಾಲೂಕಿಗೆ ಪ್ರಭಾರಿ ಅಧಿಕಾರಿಗೆ ಬದಲಾಗಿ ಶಾಸ್ವತವಾಗಿ ಪುನರ್ವಸತಿ ಅಧಿಕಾರಿಯನ್ನೇ ನೇಮಿಸಿ, ನಿರಾಶ್ರಿತರ ಸಮಸ್ಯೆ ಆಲಿಸಿ, ಪರಿಹಾರ ಕಂಡುಕೊಳ್ಳಲು ಅಧಿಕಾರಿಯನ್ನೇ ಸ್ಥಳಕ್ಕೆ ಕಳಿಸಿಕೊಡುವಂತೆ ಸಚಿವರು ಸೂಚಿಸಿದರು.
ಇದಲ್ಲದೇ ಪುನರ್ವಸತಿ ಕೇಂದ್ರಗಳಲ್ಲಿ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗಮನ ಹರಿಸಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರತಾಪ ಕೊಡಗೆ ಅವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಣಗೂರು ಪುನರ್ವಸತಿ ಕೇಂದ್ರದ ವಿನಾಯಕ ವಂದಾಲ, ಹನುಮಂತಗೌಡ ಪಾಟೀಲ, ಕಮದಾಳ ಪುನರ್ವಸತಿ ಕೇಂದ್ರದ ಬಸವರಾಜ ಮೇಟಿ, ಅಶೋಕ ಖಾನಾಪುರ, ನಿಡಗುಂದಿ ಪ್ರಮುಖರಾದ ಸಿದ್ದಣ್ಣ ನಾಗಠಾಣ, ಸಂಗಮೇಶ ಬಳಿಗಾರ, ಲಕ್ಷ್ಮಣ ವಿಭೂತಿ, ಪುನರ್ವಸತಿ ಕೇಂದ್ರಗಳ ಪಟ್ಟಣ ಪಂಚಾಯತ್ ಸದಸ್ಯರಾದ ಕರಿಯಪ್ಪ, ರಾಜು, ಬಸವರಾಜ ಹಾಗೂ ವಿವಿಧ ಪುನರ್ವಸತಿ ಕೇಂದ್ರಗಳ ಯೋಜನಾ ನಿರಾಶ್ರಿತರು, ಪಂಚಾಯತ್ ರಾಜ್ ಇಂಜಿಯರಿಂಗ್‍ನ ಎಇಇ ವಿಲಾಸ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande