ಬಳ್ಳಾರಿ, 30 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವದ ಶೈಕ್ಷಣಿಕ ಕ್ರಾಂತಿಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದ್ದು, ಪತ್ರಿಯೊಬ್ಬರು ಉನ್ನತ ಶಿಕ್ಷಣ ಪಡೆಯಬೇಕು ಎಂದು ಆಂಧ್ರಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ತೇಜಸ್ವಿ ವಿ.ಕಟ್ಟಿಮನಿ ಅವರು ತಿಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರ ಮುಖ್ಯ ಆವರಣದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯದ 16ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ಶಿಕ್ಷಣ ವ್ಯವಸ್ಥೆ ಅತೀ ಮುಖ್ಯ. ಕಾಲಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇಡೀ ವಿಶ್ವದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ನಮ್ಮ ರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಬಂದು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿರಲು, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗಳು, ಹೊಸ-ಹೊಸ ಕರಗಳು ಕೂಡ ಕಾರಣ ಎಂದರು.
ಒಂದು ವಿಶ್ವವಿದ್ಯಾಲಯ ಉನ್ನತ ಸ್ಥಾನಕ್ಕೆ ಬರಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ. ಶಿಕ್ಷಕರಿಗೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮತ್ತು ಬದಲಾಯಿಸುವ ಶಕ್ತಿ ಇದೆ ಎಂದರು.
ಕೇವಲ ಅಂಕಗಳಿಗಾಗಿ ಮಾತ್ರ ಶಿಕ್ಷಣ ಸೀಮಿತವಾಗಿರದೇ ನಿಮ್ಮದೇ ಆದ ಕೌಶಲ್ಯಗಳನ್ನು ಬೆಳೆಸಿಕೊಂಡು ಅಭಿವೃದ್ಧಿ ಸಾಧಿಸಬೇಕು. ಜಗತ್ತಿನಲ್ಲಿ ಹಲವಾರು ಭಾಷೆಗಳಿವೆ. ಹೆಚ್ಚಿನ ಭಾಷೆ ಮತ್ತು ಕೌಶಲ್ಯಗಳನ್ನು ಕಲಿತುಕೊಂಡು ಜೀವನವನ್ನು ಉನ್ನತವಾಗಿ ರೂಪಿಸಿಕೊಂಡು ಗುರಿ ತಲುಪಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಧಾರವಾಡದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಆಡಳಿತಾಧಿಕಾರಿ ಎಸ್.ಎನ್.ರುದ್ರೇಶ್ ಅವರು ಮುಖ್ಯ ಅತಿಥಿಗಳಾಗಿ, ವಿಶ್ವವಿದ್ಯಾಲಯದಲ್ಲಿ ಕುಲಸಚಿವನಾಗಿದ್ದಾಗ ವಿದ್ಯಾರ್ಥಿಗಳು ಬಹಳ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದರು. 18 ವರ್ಷದ ನನ್ನ ವೃತ್ತಿಯಲ್ಲಿ ವಿಶ್ವವಿದ್ಯಾಲಯದಲ್ಲಿಯ ಸೇವೆ ಅವಿಸ್ಮರಣೀಯ. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜ್ಞಾನವು ವಿಶಾಲವಾದದ್ದು, ಆಳವಾದ ಅಧ್ಯಯನ ಮಾಡಿದಾಗ ಅದರ ಮಹತ್ವ ತಿಳಿಯುತ್ತದೆ. ವಿದ್ಯಾರ್ಥಿಗಳು ನಿಮ್ಮಲ್ಲಿರುವ ಕಲೆ ಮತ್ತು ಕೌಶಲ್ಯವನ್ನು ಉಪಯೋಗಿಸಿ ನಿಮ್ಮ ಗುರಿ ತಲುಪಬೇಕು ಎಂದು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಎಂ. ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿವಿಧ ವಿಶ್ವವಿದ್ಯಾನಿಲಯಗಳ ಜೊತೆ ಪೈಪೆÇೀಟಿ ನೀಡಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯಕ ಮತ್ತು ವಿದ್ಯಾರ್ಥಿಗಳ ಔಚಿತ್ಯಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ನಮ್ಮ ಶಿಕ್ಷಣ ಮುಂದುವರಿಸಿಕೊಂಡು ವಿದ್ಯಾರ್ಥಿಗಳ ಅರ್ಹತೆಗೆ ಅನುಗುಣವಾಗಿ ಶಿಕ್ಷಣ ನೀಡುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿಗಳಾಗಿವೆ ಎಂದರು.
ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಶಿಕ್ಷಕರು ಹಾಗೂ ಬೋಧಕರನ್ನು ಹೊಂದಿದೆ. ಪ್ರಸ್ತುತ ವಿವಿಯಲ್ಲಿ 29 ವಿಭಾಗಗಳಿದ್ದು, ಮುಂದಿನ ದಿನಗಳಲ್ಲಿ 45 ವಿಭಾಗಗಳನ್ನು ಮಾಡುವ ಗುರಿ ಹಾಗೂ ಕೌಶಲ್ಯಧಾರಿತ ಪಠ್ಯಕ್ರಮವನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಸಾಂಸ್ಕøತಿಕ ಕಲಾ ತಂಡಗಳು ನೃತ್ಯ ಮತ್ತು ಕಲೆ ಪ್ರದರ್ಶಿಸಿದರು.
ವಿಶ್ರೀಕೃ ವಿಶ್ವವಿದ್ಯಾಲಯದ ಕುಲಸಚಿವ ನಾಗರಾಜು.ಸಿ., ಕುಲಸಚಿವ (ಮೌಲ್ಯಮಾಪನ) ಎನ್.ಎಂ.ಸಾಲಿ, ಹಣಕಾಸು ಅಧಿಕಾರಿ ನಾಗರಾಜ, ಕಾರ್ಯಕ್ರಮ ಸಂಯೋಜಕ ಎನ್.ಶಾಂತನಾಯ್ಕ್ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್