ಬೆಂಗಳೂರು, 30 ಜುಲೈ (ಹಿ.ಸ.) :
ಆ್ಯಂಕರ್ : ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಸಲಹೆ ನೀಡಿದ್ದಾರೆ.
ಪ್ರತಿಯೊಬ್ಬ ರೈತರಿಗೂ ಸರ್ವೆ ನಂಬರ್‌ವಾರು ಬೆಳೆಯಬೇಕಾದ ಬೆಳೆ ಮತ್ತು ಅವಶ್ಯವಿರುವ ರಸಗೊಬ್ಬರಗಳನ್ನು ಪ್ರತ್ಯೇಕವಾಗಿ ರಸಗೊಬ್ಬರ ಚೀಟಿಯಲ್ಲಿ ನಮೂದಿಸಿ ವಿತರಿಸಬಹುದಾಗಿದೆ. ಈ ಸಂಬಂಧ ಕ್ರಮ ವಹಿಸಿ ಎಂದು ಧಾರವಾಡ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯವು ಬೆಳೆಗಳಿಗೆ ಸಂಬಂಧಿಸಿದ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ. ಗ್ರಾಮಗಳಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಪ್ರತಿ ರೈತರ ಸರ್ವೆ ನಂಬರ್‌ವಾರು ಬೆಳೆಗಳನ್ನು ಬೆಳೆಯಲು ಸೂಕ್ತ ಅಧ್ಯಯನ ನಡೆಸಿ ಶಿಫಾರಸು ಮಾಡುವುದು ಅನಿವಾರ್ಯವಾಗಿದೆ. ಇದರಿಂದ ರೈತರ ಬೇಡಿಕೆಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಅನುಪಾತವನ್ನು ಸರಿದೂಗಿಸಲು ಸಹಾಯವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.
ರಸಗೊಬ್ಬರ ಚೀಟಿಯಲ್ಲಿ ಹಲವು ಅಂಶಗಳು ಒಳಗೊಂಡಿರಬೇಕು. ರೈತರ ಸರ್ವೆ ನಂಬರ್, ಜಮೀನಿನ ಮಣ್ಣಿನ ಫಲವತ್ತತೆಯ ಪರೀಕ್ಷಾ ವರದಿ, ಪರೀಕ್ಷಾ ವರದಿಯ ಅನುಗುಣವಾಗಿ ಬೆಳೆಯ ಬೇಕಾದ ಬೆಳೆ, ಶಿಫಾರಸು ಮಾಡಿದ ಬೆಳೆಗೆ ಬೇಕಾದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರದ ವಿವರ ಹಾಗೂ ಶಿಫಾರಸಿಗೆ ಅನುಗುಣವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ವಿವರಣೆ ಇರಬೇಕು ಎಂದಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳುವುದರಿಂದ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರದ ಕೊರತೆ ಉಂಟಾಗುವುದಿಲ್ಲ. ಈ ಸಂಬಂಧ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಒಂದು ತಾಲೂಕಿನಲ್ಲಿ ಒಂದು ಹೋಬಳಿಯಲ್ಲಿ ಪ್ರಾಯೋಗಿಕವಾಗಿ ಈ ವಿಧಾನ ಅನುಸರಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರೈತರು ಬೆಳೆಯುತ್ತಿರುವ ಬೆಳೆಗಳಿಗೂ ಹಾಗೂ ರಸಗೊಬ್ಬರದ ಬೇಡಿಕೆಗೂ ವ್ಯತ್ಯಾಸ ಉಂಟಾಗುತ್ತಿದೆ. ಒಂದೇ ರೀತಿಯ ಬೆಳೆ ಬೆಳೆಯುವುದು ಹೆಚ್ಚುತ್ತಿದೆ. ಹಲವು ಬಾರಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಇದೆಲ್ಲಕ್ಕಿಂತ ಮಣ್ಣಿನ ಫಲವತ್ತತೆ ಸಹ ಕ್ಷೀಣಿಸುತ್ತಿದೆ. ಈ ಎಲ್ಲವೂಗಳಿಗೆ ಪರಿಹಾರ ಎಂಬಂತೆ ರಸಗೊಬ್ಬರ ಚೀಟಿ ಸಹಾಯವಾಗಲಿದೆ ಎಂದು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa