ಬೆಂಗಳೂರು, 30 ಜುಲೈ (ಹಿ.ಸ.) :
ಆ್ಯಂಕರ್ : ಹಿಂದುಳಿದ ವರ್ಗದ ಉದಯೋನ್ಮುಖ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಮೀಸಲಾದ ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ 2015ರಲ್ಲಿ ನಡೆದ ಸಮೀಕ್ಷೆ ಪ್ರಕಾರ, ಹಿಂದುಳಿದ ವರ್ಗಗಳ ಸಂಖ್ಯೆ ಸುಮಾರು ಶೇಕಡಾ 70ರಷ್ಟು (4.42 ಕೋಟಿ) ಇದ್ದು, ಒಬಿಸಿ ವರ್ಗದ ವ್ಯಾಪ್ತಿಯಲ್ಲಿ 1880 ಜಾತಿ ಮತ್ತು ಉಪಜಾತಿಗಳು ಬರುತ್ತವೆ. ಈ ವರ್ಗದ ಉದಯೋನ್ಮುಖ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಮೀಸಲಾದ ಯಾವುದೇ ಪ್ರತ್ಯೇಕ ಬಂಡವಾಳ/ಅನುದಾನ ವ್ಯವಸ್ಥೆ ಇಲ್ಲದಿರುವುದರಿಂದ ಈ ವರ್ಗದ ಯುವ ಉದ್ಯಮಿಗಳ ಕೈಗಾರಿಕೆ ಸ್ಥಾಪನೆ ವಲಯದಿಂದ ದೂರ ಉಳಿಯುತ್ತಿದ್ದಾರೆ. ಹಾಗಾಗಿ, ಹಿಂದುಳಿದ ವರ್ಗದ ಯವ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಸರ್ಕಾರದ ಹಂತದಲ್ಲಿ ಒಂದು ನಿಧಿ ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದು ತಮ್ಮ ಉದ್ದೇಶವನ್ನು ವಿವರಿಸಿರುವ ಸಚಿವರು , ಈ ಸಂಬಂಧ ನೀತಿ ರೂಪಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನವನ್ನು ನೀಡಲು ಕೋರಿದ್ದಾರೆ.
ಅನುದಾನ ಕ್ರೋಡೀಕರಣ ಹೇಗೆ?
ಪ್ರತ್ಯೇಕ ನಿಧಿಗೆ ಅನುದಾನ ಕ್ರೋಡೀಕರಿಸುವ ಸಂಬಂಧ ತಮ್ಮ ಪತ್ರದಲ್ಲಿ ವಿವರಿಸಿರುವ ಸಚಿವರು, ಈ ನಿಧಿಗೆ ಸರ್ಕಾರದಿಂದ ಅನುದಾನ ಒದಗಿಸುವುದು, ಖಾಸಗಿ ವಲಯದ ವಿವಿಧ ರೀತಿಯ ಹೂಡಿಕೆದಾರರಿಂದ ಹೂಡಿಕೆಗೆ ಅವಕಾಶ ಮಾಡಿಕೊಡಬಹುದಾಗಿದೆ ಎಂದು ಹೇಳಿದ್ದಾರೆ.
ನವೋದ್ಯಮ ಸ್ಥಾಪನೆಗೆ ಅವಕಾಶ
ಈ ಪ್ರತ್ಯೇಕ ನಿಧಿಯಿಂದ, ಸರ್ಕಾರ ಮತ್ತು ಖಾಸಗಿ ವಲಯದ ಹೂಡಿಕೆದಾರರು ಅಂತಿಮಗೊಳಿಸುವ ಯುವ ಹಿಂದುಳಿದ ವರ್ಗಗಗಳಿಗೆ ನವೋದ್ಯಮಗಳನ್ನು ಆರಂಭಿಸಲು ಅನುದಾನ ಒದಗಿಸಬಹುದು. ಇದರಿಂದ ಹಿಂದುಳಿದ ವರ್ಗದ ಉದ್ಯಮಿಮಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆ ಎಂಬ ಆಶಾಭಾವನೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa