ಕೊಪ್ಪಳ, 30 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಎನ್.ಸಿ.ಡಿ. ಕೋಶದ ಸಂಯುಕ್ತ ಆಶ್ರಯದಲ್ಲಿ ಅಸಾಂಕ್ರಮಿಕ ರೋಗಗಳ ನಿತಂತ್ರಣ ಹಾಗೂ ನಿರ್ವಹಣೆ ಮಹತ್ವಾಂಕ್ಷಿ ಕಾರ್ಯಕ್ರಮವಾದ ಗೃಹ ಆರೋಗ್ಯ ಯೋಜನೆಯ ಆಶಾ ಕೈಪಿಡಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಚಾಲನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯಕಾಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ. ಲಿಂಗರಾಜ ಟಿ. ಅವರು ಗೃಹ ಆರೋಗ್ಯ ಯೋಜನೆಯ ಕುರಿತು ಮಾಹಿತಿ ನೀಡಿ, ಈ ಯೋಜನೆಯ ಉದ್ದೇಶ ಆರೋಗ್ಯ ಸೇವೆ ಮನೆ ಬಳಿಗೆ ನೀಡುವುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 30+ ವಯಸ್ಸಿನ ಜನರಿಗೆ ಅಸಾಂಕ್ರಮಿಕ ರೋಗಗಳ ತಪಾಸಣೆ ನಿರ್ವಹಣೆ, ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆ ಬೇಟಿ ಮೂಲಕ ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಜೀವನ ಶೈಲಿ ಬದಲಾವಣೆಯನ್ನು ಪ್ರೋತ್ಸಾಹಿಸುವುದು ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಚಿಕಿತ್ಸೆಗಾಗಿ ಔಷಧಿಗಳ ಬಳಕೆ, ಅಸಾಂಕ್ರಾಮಿಕ ರೋಗಗಳ ಪ್ರಾರಂಬಿಕ ಹಂತದಲ್ಲೆ ಪತ್ತೆ ಹಚ್ಚಿ, ನಿರಂತರ ಉಚಿತ ತಪಾಸಣಾ ಹಾಗೂ ಚಿಕಿತ್ಸೆ ಮೂಲಕ ಅಡ್ಡ ಪರಿಣಾಮ ಮತ್ತು ಅಕಾಲಿಕ ಮರಣ ತಡೆಗಟ್ಟುವುದಾಗಿದೆ ಎಂದರು.
ಈ ಕಾರ್ಯಕ್ರಮದಡಿಯಲ್ಲಿ 14 ಅಸಾಂಕ್ರಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬಾಯಿ ಕಾನ್ಸರ್, ಸ್ತನ ಕಾನ್ಸರ್, ಗರ್ಭಕಂಠದ ಕಾನ್ಸರ್, ಡಯಾಬೆಟಿಕ್ ಫೂಟ್, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಿಂಡದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಲಿವರ್ ಕಾಯಿಲೆ, ರಕ್ತಹೀನತೆ ಈ ಎಲ್ಲಾ ಕಾಯಿಲೆಗಳ ಪ್ರಾಥಮಿಕ ತಪಾಸಣೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಎಚ್., ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮ ಸಂಯೋಜಕಿ ಡಾ. ಜಯಶ್ರೀ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್