ಕಂಪ್ಲಿ, 30 ಜುಲೈ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಹದ ನೀರು ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರೆ ರೋಗಾಣುಗಳಿಂದ ಕಲುಷಿತಗೊಂಡಿರಬಹುದಾಗಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಬುಧವಾರ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ, ನೀರಿನ ಹರಿಯುವ ಮಟ್ಟ ಹೆಚ್ಚಾಗಿ ಹಾವು ಚೇಳು ಇತರೆ ವಿಷ ಜಂತುಗಳು ಜನವಾಸ ಪ್ರದೇಶಕ್ಕೆ ಬರುವ ಸಂಭವವಿದೆ. ನೀರಿನ ಹರಿವಿನಿಂದ ಅಪಾಯ ಸಂಭವಿಸುವ ಸಂದರ್ಭದಲ್ಲಿ ಸುರಕ್ಷಿತೆಗಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ತಿಳಿಸಿದರು.
ಹಾವು ನಂಜು ನಿರೋಧಕ ಲಸಿಕೆ, ಓ.ಆರ್.ಎಸ್ ದ್ರಾವಣ, ನೆಗಡಿ ಕೆಮ್ಮು ಜ್ವರದ ಮಾತ್ರೆ, ಐ.ವಿ.ಫ್ಲೂಡ್, ಹ್ಯಾಲೋಜನ್ ಮಾತ್ರೆ, ಬ್ಲೀಚಿಂಗ್ ಪೌಡರ್ ಇತರೆ ಚಿಕಿತ್ಸಾ ಸೇವಾ ಸೌಲಭ್ಯಗಳು ಸಾಕಷ್ಟು ಪ್ರಮಾಣದಲ್ಲಿ ಮುಂಚೂಣಿಯಾಗಿ ಸಂಗ್ರಹಿಸಿ ಎಚ್ಚರಿಕೆ ವಹಿಸಲಾಗಿದೆ ಎಂದರು.
ಸಮುದಾಯದಲ್ಲಿ ಗೃಹ ಆರೋಗ್ಯ ಕಾರ್ಯಕ್ರಮ, ಗರ್ಭಿಣಿ, ಗಂಡಾAತರ ಗರ್ಭಿಣಿಯರ ಕಾಳಜಿ, ಸುಸೂತ್ರ ಹೆರಿಗೆ ಸೌಲಭ್ಯ, ತಾಯಿ ಮಗುವಿನ ಆರೈಕೆ ಕುರಿತಂತೆ ಆರೋಗ್ಯ ಪರ ಕ್ರಮಗಳನ್ನು ಅನುಸರಿಸಬೇಕು. ಅಪಾಯಕಾರಿ ಪ್ರದೇಶಗಳಲ್ಲಿನ ಜನಾರೋಗ್ಯ ಸಮೀಕ್ಷೆ ಪ್ರತಿದಿನ ನಡೆಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ದಿಶಾ ಸಮಿತಿಯ ಸದಸ್ಯ ಎ.ಸಿ.ದಾನಪ್ಪ, ಆರೋಗ್ಯ ಮೇಲ್ವಿಚಾರಕ ಟಿ.ವಿರೂಪಾಕ್ಷಪ್ಪ, ತಾಲ್ಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್