ಮಂಡ್ಯ, 28 ಜುಲೈ (ಹಿ.ಸ.) :
ಆ್ಯಂಕರ್ : ಒಂದೇ ದಿನ 1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಹೇಳುವ ಬಿಜೆಪಿಗೆ ಇದು ನಮ್ಮ ಸರ್ಕಾರದ ಸವಾಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಕಾವೇರಿ ಅಭಿವೃದ್ಧಿ ನಿಗಮ ಒಂದರಲ್ಲೇ ಎರಡು ವರ್ಷದಲ್ಲಿ 560 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ ಎಂದು ಸವಾಲೆಸೆದರು.
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮಂಡ್ಯ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಚುಕ್ತಾ ಮಾಡಿದ್ದು ನಾವು, ಕಾರ್ಖಾನೆಯ ಪುನಶ್ಚೇತನಕ್ಕೆ 52 ಕೋಟಿ ರೂಪಾಯಿ ಕೊಟ್ಟಿದ್ದು ನಾವು. ಹಾಲು ಉತ್ಪಾದಕರ ಸಂಘದ ಮನವಿಗೆ ಸ್ಪಂದಿಸಿ ಹಾಲು ಉತ್ಪಾದಕರಿಗೆ ಲೀಟರ್ ಗೆ 5 ರೂ ಸಹಾಯಧನ ಒದಗಿಸಿದ್ದು ನಾವು. ಈಗ ಮತ್ತೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 10 ಕೋಟಿ ರೂ ಕೊಟ್ಟಿರುವುದು ನಮ್ಮ ಸರ್ಕಾರ. ಮಂಡ್ಯ ಕೃಷಿ ವಿವಿ ಆರಂಭಿಸಿ, ಅಗತ್ಯ ಅನುದಾನ ಕೊಟ್ಟಿರುವುದು ನಾವು. ಇದು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರದ ಬದ್ಧತೆ ಎಂದರು.
ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ಕೊಳ್ಳುವುದು ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಶಕ್ತಿ ಬಂದಿದೆ. ಪರಿಣಾಮ ಇಡೀ ದೇಶದಲ್ಲಿ ರಾಜ್ಯದ ತಲಾ ಆದಾಯ ಪ್ರಥಮ ಸ್ಥಾನದಲ್ಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa